ADVERTISEMENT

ಹಾವೇರಿ: ಕ್ರಿಸ್‌ ಮಸ್: ಶುಭ ಸಂದೇಶ ವಿನಿಮಯ

ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಆಚರಣೆ, ಏಸುಕ್ರಿಸ್ತರ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:58 IST
Last Updated 25 ಡಿಸೆಂಬರ್ 2018, 12:58 IST
ಅಲಂಕರಿಸಲಾದ ಕ್ರಿಸ್‌ ಮಸ್‌ ಗಿಡ
ಅಲಂಕರಿಸಲಾದ ಕ್ರಿಸ್‌ ಮಸ್‌ ಗಿಡ   

ಹಾವೇರಿ:ದೇವರೇ ನಾವೆಲ್ಲರೂ ನಮ್ಮ ಪಾಪ ಅಪರಾಧಗಳಿಗೆ ನಿಮ್ಮ ಬಳಿ ಕ್ಷಮೆ ಬೇಡುತ್ತೆವೆ. ನೀವು ಕರುಣಾಮಯಿ ನಮ್ಮನ್ನು ಕ್ಷಮಿಸು...
–ನಗರದ ದೇವಧರ ಚರ್ಚ್‌ನಲ್ಲಿ ಮಂಗಳವಾರ ಕ್ರಿಸ್‌ಮಸ್ ಅಂಗವಾಗಿ ಭಕ್ತಿ ಶ್ರದ್ಧೆಯ ಪ್ರಾರ್ಥನೆಯು ಮೊಳಗಿತು.

ಚರ್ಚ್‌, ಶಾಲಾ ಕಾಲೇಜು ಹಾಗೂ ಕ್ರೈಸ್ತರ ಮನೆಗಳಲ್ಲಿ ಗೋದಲಿ (ಕುರಿಗಳ ಹಟ್ಟಿ)ಗಳನ್ನು ನಿರ್ಮಿಸಲಾಗಿತ್ತು. ಕ್ರಿಸ್‌ಮಸ್ ಗಿಡ ನೆಡಲಾಗಿತ್ತು. ಗೋದಲಿಯಲ್ಲಿ ಕುರಿಮರಿ, ದನಕರುಗಳ ನಡುವೆ ಕುಳಿತ ಮೇರಿಯಮ್ಮ ಅವರ ಕೈಯಲ್ಲಿ ಬಾಲಏಸುವಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಕ್ರೈಸ್ತರ ಜನನದ ಸಂದೇಶ ಸಾರಲಾಗಿತ್ತು.

ಗೋದಲಿ, ಮನೆ, ಚರ್ಚ್‌ಗಳ ಸುತ್ತ ನೇತಾಡುವ ನಕ್ಷತ್ರಗಳು, ಆಕಾಶಬುಟ್ಟಿ, ವಿದ್ಯುತ್ ದೀಪಾಲಂಕಾರ, ಕ್ಯಾಂಡಲ್‌ ದೀಪಗಳು ಮನ ಸೆಳೆದವು.

ADVERTISEMENT

ಸೋಮವಾರ ಮಧ್ಯ ರಾತ್ರಿಯೇ ನಗರದ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಅನ್ನು ಆಚರಿಸಲಾಯಿತು. ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು. ಶ್ರದ್ಧಾ ಭಕ್ತಿಯಿಂದ ಎಲ್ಲರಿಗೂ ಶ್ರೇಯಸ್ಸು ಬರಲಿ ಎಂದು ಪ್ರಾರ್ಥಿಸಿದರು. ಅಂತೆಯೇ ಎಲ್ಲರೂ ಸಂದೇಶಗಳಿಗೆ ‘ಆಮೀನ್’ ಎಂದರು. ಬಳಿಕ ಗೋದಲಿಯಲ್ಲಿ ಬಾಲಏಸು ಮೂರ್ತಿಯನ್ನು ಇಟ್ಟು, ದೇವರ ಸ್ತುತಿ, ಜೋಗುಳ ಮೂಲಕ ಆರಾಧಿಸಿದರು. ಮೇಣದಬತ್ತಿ ಬೆಳಗಿದರು. ಹೂವು, ಸುಗಂಧ ಅರ್ಪಿಸಿದರು.

ಹಳೆ ಒಡಂಬಡಿಕೆಯ ಸಾಲುಗಳು, ಕ್ಯಾರೆಲ್ ಹಾಡುಗಳು, ವಿಶೇಷ ಸಂಗೀತ, ಹೊಸ ಒಡಂಬಡಿಕೆಯ ಕೀರ್ತನೆ ಪಠಿಸಲಾಯಿತು. ಬಡವರ, ಅನಾಥರು, ಹಾಗೂ ನಿರ್ಗತಿಕರಿಗಾಗಿ ಪ್ರಾರ್ಥಿಸಿದರು.

ಮಂಗಳವಾರ ಬೆಳಿಗ್ಗೆ ಹೊಸ ಬಟ್ಟೆ ತೊಟ್ಟು ಕುಟುಂಬ ಸಮೇತರಾಗಿ ಬಂದ ಭಕ್ತರು, ಸಾಮೂಹಿಕ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರು. ಕ್ಯಾರೆಲ್‌ ಹಾಡಿನ ಮೂಲಕ ಭಜಿಸಿದರು. ವಿವಿಧ ಧರ್ಮಗಳ ಜನರು ಸಾಮರಸ್ಯದಿಂದ ಪಾಲ್ಗೊಂಡರು.

ಧರ್ಮಗುರು ಡಾ.ವಿಜಯ ನಾಯ್ಕರ್ ಮಾತನಾಡಿ, ‘ವಿಶ್ವವೇ ಶಾಂತಿಗಾಗಿ ಹಾತೊರೆಯುತ್ತಿದೆ. ಅದರಂತೆ ಏಸುಕ್ರಿಸ್ತರ ಸಂದೇಶವು ಶಾಂತಿ ಪ್ರೀತಿಯನ್ನು ಹೇಳುತ್ತದೆ. ಇಡೀ ಬಾಳಿನಲ್ಲಿ ನಮಗೆ ಆರೋಗ್ಯ ಕರುಣಿಸಲಿ, ನಿತ್ಯ ನಮಗೆ ಸುಭಿಕ್ಷೆಯಿಂದ ಇಡಲಿ. ಇದು ಮನುಕುಲದ ಏಳಿಗೆಗೆ ಪ್ರೇರಣೆಯಾಗಲಿ’ ಎಂದರು.

ಹಾನಗಲ್‌ ರಸ್ತೆಯ ಸೇಂಟ್ ಆ್ಯನ್ಸ್‌ ಶಾಲಾ ಬಳಿ ಚರ್ಚ್‌ನಲ್ಲಿ ಧರ್ಮಗುರು ಮಾರ್ಟಿನ್ ವಾಜ್‌ ನೇತೃತ್ವದಲ್ಲಿ ಕ್ರಿಸ್‌ಮಸ್‌ ಆಚರಿಸಲಾಯಿತು.

ಜಿಲ್ಲೆಯಲ್ಲಿ ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಮೆಥೋಡಿಸ್ಟ್‌, ಯಹೋವನನ ಸಾಕ್ಷಿಗಳು, ನ್ಯೂ ಲೈಫ್‌ ಮತ್ತಿತರ ಪಂಥಗಳಿವೆ. ಆರಾಧನೆಯಲ್ಲಿ ವಿಭಿನ್ನತೆ ಇದ್ದರೂ ‘ಕ್ರಿಸ್‌ಮಸ್‌’ ಅನ್ನು ಸಂಭ್ರಮದಿಂದ ಲೋಕಕಲ್ಯಾಣದ ಏಕೋಭಾವದಿಂದ ಆಚರಿಸಲಾಗುತ್ತದೆ ಎಂದು ಮಂಜುನಾಥ ಸವಣೂರ ತಿಳಿಸಿದರು.

ಡಿಸೆಂಬರ್‌ 31ರ ಮಧ್ಯಾರಾತ್ರಿ ಹೊಸ ವರ್ಷವನ್ನು ಅತ್ಯಂತ ಸಂಭ್ರದಿಂದ ಆಚರಿಸುತ್ತೇವೆ ಎಂದು ಮುಖಂಡ ಶಾಂತರಾಜ ಕತ್ತೇಬೆನ್ನೂರ ತಿಳಿಸಿದರು.

ಕ್ರೈಸ್ತರ ಮನೆಗಳಲ್ಲಿ ನೆಂಟರು, ಸ್ನೇಹಿತರು, ಹಣ್ಣು ಹಂಪಲುಗಳು, ಕೇಕ್‌ ಹಾಗೂ ವಿಶೇಷ ಖಾದ್ಯದ ಮೂಲಕ ಭೋಜನ ಸವಿದರು. ಮುಖಂಡರಾದ ಮಾಧುರಿ ದೇವಧರ, ನೋವೆರಾಜ ಗಂಧದ, ಮನೋಜಕುಮಾರ ಪುನೀತ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.