ADVERTISEMENT

ಬಿಜೆಪಿಯಿಂದ ಮತಬ್ಯಾಂಕ್‌ ಭದ್ರಗೊಳಿಸುವ ಹುನ್ನಾರ: ಸಿ.ಎಂ.ಇಬ್ರಾಹಿಂ ವಾಗ್ದಾಳಿ

ಸಮಾವೇಶದಲ್ಲಿ ವಿಧಾನ ಪರಿಷತ್‌ ಸದಸ್ಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 15:51 IST
Last Updated 27 ಜನವರಿ 2020, 15:51 IST
ಹಾವೇರಿಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿದರು 
ಹಾವೇರಿಯಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿದರು    

ಹಾವೇರಿ: ‘ಸಿಎಎ ಜಾರಿಗೆ ತರುವ ಮೂಲಕ ಮತಬ್ಯಾಂಕ್‌ ಅನ್ನು ಭದ್ರಗೊಳಿಸುವುದು, ಸಂವಿಧಾನ ಬದಲಾವಣೆ ಹಾಗೂ ದೇಶದಲ್ಲಿರುವ ಹಣ ಲೂಟಿ ಮಾಡುವುದೇ ಬಿಜೆಪಿ ಮುಖ್ಯ ಉದ್ದೇಶವಾಗಿದೆ’ ಎಂದುವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದ ಗೌಸಿಯಾ ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಸಂವಿಧಾನ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವ ಕುರಿತು ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದೂ ಧರ್ಮದಲ್ಲಿ ‘ವಸುದೈವ ಕುಟುಂಬಕಂ’ ಎಂಬ ವಾಖ್ಯಾನವಿದೆ. ಜಗತ್ತೇ ಒಂದು ಕುಟುಂಬ ಎಂಬ ಅರ್ಥವನ್ನು ಈ ಸಾಲು ನೀಡುತ್ತದೆ. ಆದರೆ, ಬಿಜೆಪಿಯವರು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ADVERTISEMENT

ಬಾಬಾಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನದಿಂದ ಲಕ್ಷಾಂತರ ಜನರಿಗೆ ಮೀಸಲಾತಿ ಸಿಗುವಂತಾಗಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಯಾವುದೇ ಮೀಸಲಾತಿ ಇಲ್ಲ. ಆದರೂ ದೇಶದ ಬಗ್ಗೆ ಮುಸ್ಲಿಮರಿಗೆ ಕಾಳಜಿ ಇದೆ ಎಂದರು.

ಸಿಎಎಯಿಂದ ಇಸ್ಲಾಂ ಧರ್ಮಕ್ಕೆ ತೊಂದರೆಯಾಗಿದ್ದರೆ ಹಸಿರು ಬಾವುಟ ಹಿಡಿದು ಹೋರಾಟ ಮಾಡುತ್ತಿದ್ದೆವು. ಆದರೆ, ಇದು ಸಂವಿಧಾನದ ಆಶಯ ಹಾಗೂ ದೇಶಕ್ಕೆ ಮಾರಕವಾಗಿದೆ. ಕೇಂದ್ರದಲ್ಲಿ ಹಲವಾರು ಮಂತ್ರಿಗಳಿದ್ದರೂ, ಕೇವಲ ನರೇಂದ್ರ ಮೋದಿ, ಅಮಿತ್‌ ಶಾ ಅವರ ಹೆಸರುಗಳೇ ಹೆಚ್ಚು ಪ್ರಚಲಿತವಾಗಿದೆ. ಇನ್ನುಳಿದವರು ದಿಕ್ಕಿಲ್ಲದೆ ಓಡಾಡುತ್ತಿದ್ದಾರೆ ಎಂದು ಕುಟುಕಿದರು.

ಆರ್ಥಿಕ ಇಲಾಖೆಯ ಬಗ್ಗೆ ಪ್ರಧಾನಿ ಮೋದಿ ಅನೇಕ ಸಭೆಗಳನ್ನು ನಡೆಸಿದ್ದಾರೆ. ಆದರೆ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅವರು ಎಲ್ಲಿಯೂ ಕಾಣುತ್ತಿಲ್ಲ. ಕೇಂದ್ರದ ಹಣಕಾಸೂ ನೀತಿಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಪ್ರಧಾನಿ ಯಾವ ಕೆಲಸ ಮಾಡಬೇಕು, ಯಾವ ಕೆಲಸ ಮಾಡಬಾರದು ಎಂದು ಅವರಿಗೆ ಅರಿವಿಲ್ಲ. ಯುವಕರು ತಮ್ಮ ಮನಸಿನ ಮಾತು ಹೇಳಿಕೊಳ್ಳುವಂತೆ, ಮೋದಿ ಮನ್‌ಕೀ ಬಾತ್‌ ಮಾಡುತ್ತ ಕಾಲ ಹರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಎಂ. ಹಿರೇಮಠ, ಎಸ್‌.ಎಫ್‌.ಎನ್‌. ಗಾಜಿಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ, ಕೆ.ಸಿ.ಅಕ್ಷತಾ, ಬಸವರಾಜ ಪೂಜಾರ ಮತ್ತಿತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.