ADVERTISEMENT

ರಾಜಕೀಯದಿಂದ ಸ್ವಾಮೀಜಿಗಳು ದೂರವಿರಲಿ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:01 IST
Last Updated 28 ನವೆಂಬರ್ 2025, 4:01 IST
ಶಿವಾನಂದ ಪಾಟೀಲ
ಶಿವಾನಂದ ಪಾಟೀಲ   

ಹಾವೇರಿ: ‘ಮುಖ್ಯಮಂತ್ರಿ ಸ್ಥಾನ ಸೇರಿ ಯಾವುದೇ ವಿಷಯವಿದ್ದರೂ ನಮ್ಮ ನಾಯಕರು ನಿರ್ಧರಿಸುವರು. ಇನ್ನೆರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುವ ನಿರೀಕ್ಷೆಯಿದೆ. ಈ ವಿಷಯಗಳಲ್ಲಿ ಸ್ವಾಮೀಜಿಗಳು ಹೇಳಿಕೆ ನೀಡಬಾರದು. ಅವರು ರಾಜಕಾರಣದಿಂದ ದೂರವಿರಬೇಕು’ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.

‘ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಾದಿಸಬೇಕು. ಉತ್ತಮ ಬದುಕಿಗೆ ಹಾರೈಸಬೇಕು. ಅದನ್ನು ಬಿಟ್ಟು ರಾಜಕೀಯ ಮಾಡಬಾರದು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಾತು ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಕೊಟ್ಟ ಮಾತಿನ ಅರ್ಥವೇನು ಎಂಬುದು ಗೊತ್ತಿಲ್ಲ. ಯಾರ ಎದುರು ಮಾತು ಕೊಟ್ಟರು? ಯಾರೆಲ್ಲ ಇದ್ದರೂ ಎಂಬುದು ನನಗೆ ಗೊತ್ತಿಲ್ಲ. ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಉಳಿದರೆ ಮಾತ್ರ ವ್ಯಕ್ತಿಯ ಉಳಿವು. ಅಧಿಕಾರದಲ್ಲಿ ಇರುವುದು ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದಾಗ ಏನು ಮಾಡುತ್ತೇವೆ ಎಂಬುದು ಮುಖ್ಯ’ ಎಂದರು.

ADVERTISEMENT

‘ಪಕ್ಷದಲ್ಲಿ ಎಲ್ಲರೂ ದುಡಿದಿದ್ದಾರೆ. ಸಚಿವ ಸ್ಥಾನದ ಬಗ್ಗೆ ಆಸೆಯಿರುತ್ತದೆ. ಸಾಮರ್ಥ್ಯವೂ ಇರುತ್ತದೆ. ಸಂದರ್ಭ ಬಂದಾಗ ಹೈಕಮಾಂಡ್ ಎಲ್ಲವನ್ನೂ ಕೊಡುತ್ತದೆ. ನಮ್ಮಲ್ಲಿ ಯಾವುದೇ ರೀತಿಯ ಬಣವಿಲ್ಲ. 140 ಶಾಸಕರಲ್ಲೂ ಒಗ್ಗಟ್ಟಿದೆ’ ಎಂದರು.

‘ದೆಹಲಿ, ಬೆಂಗಳೂರಿನಲ್ಲಿ ಉತ್ತರ ಸಿಗಬಹುದು’- ಸಚಿವ ಸತೀಶ ಜಾರಕಿಹೊಳಿ

ಹಾವೇರಿ: ‘ಕೊಟ್ಟ ಮಾತಿನ ಬಗ್ಗೆ ದೆಹಲಿ ಅಥವಾ ಬೆಂಗಳೂರಿನಲ್ಲಿ ಕೇಳಿದರೆ, ಉತ್ತರ ಸಿಗಬಹುದು. ಹಾವೇರಿಯಲ್ಲಿ ಕೇಳಿದರೆ ಸಿಗುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಅತ್ಯಂತ ದೊಡ್ಡ ಶಕ್ತಿ ಯಾವುದೆಂದರೆ, ಕೊಟ್ಟ ಮಾತು ಉಳಿಸಿಕೊಳ್ಳುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಪೋಸ್ಟ್ ಬಗ್ಗೆ ಹಾವೇರಿಯಲ್ಲಿ ಗುರುವಾರ ಪ್ರತಿಕ್ರಿಯಿಸಿದ ಜಾರಕಿಹೊಳಿ, ‘ಎಲ್ಲರ ಪ್ರಯತ್ನದಿಂದ ಸರ್ಕಾರ ಬಂದಿದೆ. ಕೆಲವರಿಗೆ ಕೂಲಿ ಸಿಗುತ್ತದೆ. ಕೆಲವರಿಗೆ ಸಿಗುವುದಿಲ್ಲ. ಆದಷ್ಟು ಬೇಗ ಈ ಗೊಂದಲ ಬಗೆಹರಿಯಬೇಕು. ಅದಕ್ಕೆ ಕೋರಿದ್ದೇವೆ’ ಎಂದರು.

‘ಪಕ್ಷದ ವೇದಿಕೆಯಲ್ಲಿ ನಾನು ಎಲ್ಲವನ್ನೂ ಹೇಳಿದ್ದೇನೆ. ಅಲ್ಲಿಯೇ ಎಲ್ಲವನ್ನೂ ಮಾತನಾಡುತ್ತೇವೆ. 2028ರ ಚುನಾವಣೆಗಾಗಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸದ್ಯದ ಗೊಂದಲದ ಸಂದರ್ಭದಲ್ಲಿ ಸಮುದಾಯದ ಪರವಾಗಿ ಸ್ವಾಮೀಜಿ ಮಾತನಾಡುವುದು ಹೊಸದಲ್ಲ. ಈ ಹಿಂದೆಯೂ ಸ್ವಾಮೀಜಿಗಳು, ಸಮುದಾಯದ ಪರ ಮಾತನಾಡಿದ್ದಾರೆ’ ಎಂದರು.

‘ಅಧಿವೇಶನದಲ್ಲಿ ಬಿಜೆಪಿಯವರು ಅವಿಶ್ವಾಸ ನಿರ್ಣಯವನ್ನು ಮಂಡಿಸಬಹುದು. ಈ ಹಿಂದೆ ಕೂಡ ಮಾಡಿದ್ದರು. ಅದು ಹೊಸದಲ್ಲ. ಅವಿಶ್ವಾಸ ನಿರ್ಣಯದಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.