ಹಾವೇರಿ: ‘ಜಿಲ್ಲೆಯಲ್ಲಿ ಜೂಜು, ಮಟ್ಕಾ, ಮದ್ಯ ಅಕ್ರಮ ಮಾರಾಟ ಸೇರಿ ವಿವಿಧ ಅಕ್ರಮ ಚಟುವಟಿಕೆಗಳು ವಿಪರೀತವಾಗಿವೆ. ಕಾಂಗ್ರೆಸ್ಸಿನವರಲ್ಲಿ ಕ್ರಿಮಿನಲ್ ಬುದ್ದಿ ಹೆಚ್ಚಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ಕಾರ್ಯಕರ್ತರು ಕ್ರಿಮಿನಲ್‌ಗಳಿದ್ದಾರೆ. ಮಾಜಿ ಶಾಸಕನಾದ ನಾನು ಸೇರಿದಂತೆ ಜಿಲ್ಲೆಯ ಜನಸಾಮಾನ್ಯರು ಭಯದಲ್ಲಿ ಜೀವನ ನಡೆಸುವಂತಾಗಿದೆ’ ಎಂದರು.
‘ಜಿಲ್ಲೆಗೆ ಹೊಸದಾಗಿ ಬಂದಿರುವ ಪೊಲೀಸ್ ವರಿಷ್ಠಾಧಿಕಾರಿ ಸಹ ಅಕ್ರಮ ಚಟುವಟಿಕೆ ಮಾಡುವವರ ಜೊತೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜಿಲ್ಲೆಯಲ್ಲಿ ಜನರು ನೆಮ್ಮದಿಯಿಂದ ಬದುಕುವ ವಾತಾವರಣವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.
‘ಬ್ಯಾಡಗಿ ಪಟ್ಟಣ, ತಾಲ್ಲೂಕಿನ ಅದಾನಿಕೊಪ್ಪ, ಕದರಮಂಡಲಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರಾಜಾರೋಷವಾಗಿ ಮಟ್ಕಾ–ಜೂಜು ನಡೆಯುತ್ತಿದೆ. ಚಿತ್ರದುರ್ಗ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಯಿಂದಲೂ ಜನರು ಬಂದು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ನಡೆಸುವವರು, ಪ್ರತಿ ತಿಂಗಳು ಪೊಲೀಸರಿಗೆ ಹಫ್ತಾ ನೀಡುತ್ತಿದ್ದಾರೆ. ಅಕ್ರಮ ದಂಧೆಕೋರರಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ’ ಎಂದು ಆರೋಪಿಸಿದರು.
‘ಬ್ಯಾಡಗಿಯಲ್ಲಿ ಮಟ್ಕಾ ದಂಧೆ ನಡೆಸುವವರು ಪೊಲೀಸರಿಗೆ ₹12 ಲಕ್ಷ ನೀಡುತ್ತಿದ್ದಾರೆ. ಹಾವೇರಿಯಲ್ಲಿ ₹12 ಲಕ್ಷ, ಹಾನಗಲ್‌ನಲ್ಲಿ ₹15 ಲಕ್ಷ ಹಾಗೂ ರಾಣೆಬೆನ್ನೂರಿನಲ್ಲಿ ₹25 ಲಕ್ಷ ಕೊಡುತ್ತಿದ್ದಾರೆ. ಉಳಿದ ಅಕ್ರಮ ಚಟುವಟಿಕೆಯಲ್ಲೂ ಪೊಲೀಸರು ಹಾಗೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದವರಿಗೆ ಮಾಮೂಲಿ ಹೋಗುತ್ತಿದೆ. ಇದೆಲ್ಲವೂ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಎಲ್ಲರೂ ಕಾಯುತ್ತಿದ್ದಾರೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರ ದಿನವೂ ಒಂದಿಲ್ಲೊಂದು ಹಗರಣ ಮಾಡಿ, ಜನರನ್ನು ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ದಿನವೂ ಹೋರಾಟ ಮಾಡಬೇಕು. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟ ತಪ್ಪಿಗೆ, ಜನರೂ ಪಶ್ಚಾತಾಪಪಡುತ್ತಿದ್ದಾರೆ. ತಪ್ಪು ದಾರಿ ತುಳಿದಿರುವುದು ಜನರಿಗೂ ಗೊತ್ತಾಗುತ್ತಿದೆ’ ಎಂದು ತಿಳಿಸಿದರು.
ಪ್ರತಿಭಟನೆ ಹತ್ತಿಕ್ಕುವ ಹುನ್ನಾರ: ‘ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಪ್ರತಿಭಟನೆ ಧ್ವನಿ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಮಾಡಿದ ಹುನ್ನಾರವಿದು’ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯದ ವಿರುದ್ಧ ಹಾಗೂ ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟಿಸುವ ಹಕ್ಕಿದೆ. ಪ್ರಮುಖ ವೃತ್ತವಾಗಿರುವ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಿದರೆ, ತಮ್ಮ ಬಂಡವಾಳ ಬಯಲಾಗುವುದೆಂದು ಕಾಂಗ್ರೆಸ್ ಭಯಪಡುತ್ತಿದೆ. ದಿಢೀರ್ ಪ್ರತಿಭಟನೆ ನಿರ್ಬಂಧ ಮಾಡಲಾಗಿದೆ’ ಎಂದರು.
‘ಇದೇ ವೃತ್ತದಲ್ಲಿ ಪ‍್ರತಿಭಟನೆ ಮಾಡಿದವರೂ ಅಧಿಕಾರ ನಡೆಸಿದ್ದಾರೆ. ಸಾಕಷ್ಟು ಪ್ರತಿಭಟನೆಗಳು ವೃತ್ತದಲ್ಲಿ ನಡೆದಿರುವುದನ್ನು ಸರ್ಕಾರ ಮರೆತಂತೆ ಕಾಣುತ್ತಿದೆ. ನಿರ್ಬಂಧ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಮುಖಂಡರಾದ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಕಲ್ಯಾಣಕುಮಾರ ಶೆಟ್ಟರ, ಸಂತೋಷ ಆಲದಕಟ್ಟಿ ಇದ್ದರು.
‘80 ಸಾವಿರ ಹೆಕ್ಟೇರ್ ಬೆಳೆ ಹಾನಿ’
‘ಜಿಲ್ಲೆಯಲ್ಲಿ ಸುಮಾರು 17 ಸಾವಿರ ಹೆಕ್ಟೇರ್ ಬೆಳೆ ಹಾನಿ ಆಗಿರುವುದಾಗಿ ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ. ಆದರೆ ನೈಜವಾಗಿ 80 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಎಲ್ಲ ರೈತರಿಗೆ ಪರಿಹಾರ ಕೊಡಿಸಲು ಬಿಜೆಪಿ ವತಿಯಿಂದ ದೊಡ್ಡ ಮಟ್ಟದ ಹೋರಾಟ ನಡೆಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ‘ನಿರಂತರ ಮಳೆಯಿಂದಾಗಿ ಗೋವಿನಜೋಳ ಜೋಳ ಹೆಸರು ಹಾಗೂ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಸರ್ಕಾರ ನೆಪಮಾತ್ರಕ್ಕೆ ಪರಿಹಾರ ನೀಡುವ ಭರವಸೆ ನೀಡಿದೆ. ಆದರೆ ಯಾವುದೇ ರೈತರಿಗೂ ಇದುವರೆಗೂ ಪರಿಹಾರ ನೀಡಿಲ್ಲ. ನಮ್ಮ ಹೋರಾಟದ ಮೂಲಕ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸುತ್ತೇವೆ’ ಎಂದರು.
‘ಅ. 11ರಂದು ನಮೋ ರನ್’
‘ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಹಮ್ಮಿಕೊಂಡಿರುವ ‘ಸೇವಾ ಪಾಕ್ಷಿಕ ಅಭಿಯಾನ’ದ ನಿಮಿತ್ತ ಹಾವೇರಿಯಲ್ಲಿ ಅಕ್ಟೋಬರ್ 11ರಂದು ‘ನಮೋ ರನ್– ನಶಾಮುಕ್ತ ಭಾರತ’ ಹೆಸರಿನಡಿ ಜಾಗೃತಿ ಓಟ ಆಯೋಜಿಸಲಾಗುತ್ತಿದೆ’ ಎಂದು ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ‘ವಾಲ್ಮೀಕಿ ವೃತ್ತದಲ್ಲಿ ಬೆಳಿಗ್ಗೆ 8 ಗಂಟೆಗೆ ಓಟಕ್ಕೆ ಚಾಲನೆ ನೀಡಲಾಗುವುದು. ಅಲ್ಲಿಂದ ಮೈಲಾರ ಮಹದೇವಪ್ಪ ವೃತ್ತದವರೆಗೂ ಓಟ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು ಸೇರಿ 600 ಮಂದಿ ಓಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲರಿಗೂ ಟಿ–ಶರ್ಟ್ ಹಾಗೂ ಪದಕ ನೀಡಲಾಗುತ್ತಿದೆ. ಇಂದಿನ ಯುವಸಮೂಹ ಡ್ರಗ್ಸ್ ವ್ಯಸನಿಗಳಾಗುತ್ತಿರುವುದು ದುರಂತರ ಸಂಗತಿ. ಈ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ಈ ಓಟ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.