ADVERTISEMENT

ಗಾಂಧಿ, ಇಂದಿರಾ ಕನಸಿಗೆ ಬೆಂಕಿ ಹಾಕಿದ ಕಾಂಗ್ರೆಸ್‌: ನಳಿನ್‌ ಕುಮಾರ್ ಕಟೀಲ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:37 IST
Last Updated 29 ಫೆಬ್ರುವರಿ 2020, 10:37 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಹಾವೇರಿ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ಮನಮೋಹನ್‌ಸಿಂಗ್‌ ಅವರ ಕನಸಿನ ಕೂಸು. ಅವರ ಕನಸುಗಳಿಗೆಕಾಂಗ್ರೆಸ್‌ ಇಂದು ಬೆಂಕಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್‌ ಕಟೀಲ್ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಏರ್ಪಸಿದ್ದ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿಎಎ ವಿರೋಧಿಸುವ ನೆಪದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸಮಾಜದ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುತ್ತಿದೆ.ಪಾಕಿಸ್ತಾನಕ್ಕೆ ಜಯವಾಗಲಿ ಎಂಬುವವರಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಪಕ್ಷ ನಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ನೆಹರೂ ಪ್ರಧಾನಿಯಾದ ನಂತರ ಒಂದೇ ಒಂದು ಬಾರಿಯೂ ‘ವಂದೇ ಮಾತರಂ’ ಹೇಳಲಿಲ್ಲ, ‘ಭಾರತ್‌ ಮಾತಾಕೀ ಜೈ’ ಎನ್ನಲಿಲ್ಲ. ಇಂದಿರಾ, ಸೋನಿಯಾ, ರಾಹುಲ್‌, ಪ್ರಿಯಾಂಕಾ ಅವರಿಗೆ ಮಾತ್ರ ಜಯಘೋಷ ಹಾಕುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆ, ಲೋಕಸಭಾ ಚುನಾವಣೆ ಮತ್ತು ದೆಹಲಿ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌ ಈಗ ಮುಳುಗುತ್ತಿರುವ ಹಡಗು. ಸಿದ್ದರಾಮಯ್ಯ ಮತ್ತು ದಿನೇಶ ಗುಂಡೂರಾವ್‌ ಅವರು ತಮ್ಮ ಸ್ಥಾನಗಳಿಗೆರಾಜೀನಾಮೆ ನೀಡಿ 6 ತಿಂಗಳಾದರೂ ಮತ್ತೊಬ್ಬರಿಗೆ ಅಧಿಕಾರ ನೀಡುವ ಯೋಗ್ಯತೆ ಕಾಂಗ್ರೆಸ್‌ಗಿಲ್ಲ ಎಂದು ಕಟುವಾಗಿ ಟೀಕಿಸಿದರು.

ಬೆಂಕಿ ಹಾಕಿದವರು ಯಾರು? ಸಿಎಎ ಬಗ್ಗೆ ಅಪಪ್ರಚಾರ ಮಾಡಿದವರು ಯಾರು? ದೇಶದ್ರೋಹಿಗಳು ಯಾರು? ಎಂದು ಬಿಜೆಪಿ ಕಾರ್ಯಕರ್ತರನ್ನು ಕೇಳಿ ಅವರಿಂದ ‘ಕಾಂಗ್ರೆಸ್‌’ ಎಂಬ ನಿರೀಕ್ಷಿತ ಉತ್ತರ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.