ADVERTISEMENT

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಗ್ಯಾರಂಟಿ ಗೌರವ: ಎಚ್.ಎಂ. ರೇವಣ್ಣ

ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ, ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 2:56 IST
Last Updated 11 ಸೆಪ್ಟೆಂಬರ್ 2025, 2:56 IST
ಹಾವೇರಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ’ದಲ್ಲಿ ‘ಮಾದಕ ವಸ್ತು ಮುಕ್ತ ಕರ್ನಾಟಕ ಹಾಗೂ ದೇವದಾಸಿ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ’ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು
ಹಾವೇರಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ’ದಲ್ಲಿ ‘ಮಾದಕ ವಸ್ತು ಮುಕ್ತ ಕರ್ನಾಟಕ ಹಾಗೂ ದೇವದಾಸಿ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ’ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು   

ಹಾವೇರಿ: ‘ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆ–-ಗೌರವದಿಂದ ಬದುಕು ಅವಕಾಶ ನೀಡಿವೆ. ಆರ್ಥಿಕ ಸ್ಥಿತಿಯೂ ಸುಧಾರಿಸಿದೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಅಭಿಪ್ರಾಯಪಟ್ಟರು.

ನಗರದ ಸಿದ್ಧಾರೂಢ ಕಾಲೊನಿಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ–ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಕಾರ್ಯಾಗಾರ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಿ. ದೇವರಾಜ ಅರಸು ಅವರ ಕಾಲದಿಂದ ಇಂದಿನ ಸಿದ್ದರಾಮಯ್ಯ ಅವರ ಕಾಲದವರೆಗೂ ಕಾಂಗ್ರೆಸ್ ಸರ್ಕಾರ, ಜನಪರ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳು, ಬಿಟ್ಟಿಭಾಗ್ಯವಲ್ಲ. ಈ ಯೋಜನೆಗಳಿಂದ ಬಡ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಗ್ಯಾರಂಟಿ ಯೋಜನೆಗಳ ಕುರಿತು ಜನರಿಂದ ಜನರಿಗೆ ತಿಳಿಸುವ ಕೆಲಸವಾಗಬೇಕು’ ಎಂದರು.

ADVERTISEMENT

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ‘ಗ್ಯಾರಂಟಿ ಯೋಜನೆಯಿಂದ ಜನರು ಆರ್ಥಿಕವಾಗಿ ಬದಲಾವಣೆಯಾಗಿದ್ದಾರೆ. ಜನಸಾಮಾನ್ಯರ ಆದಾಯವೂ ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಏರಿಕೆಯಾಗಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳಿಂದ ತಾಯಂದಿರಿಗೆ ಆತ್ಮಬಲ ಬಂದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರು, ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆಗದಷ್ಟು ಬದಲಾವಣೆ, ಗ್ಯಾರಂಟಿ ಯೋಜನೆ ಜಾರಿಗೆ ಬಂದ ಎರಡು ವರ್ಷದಲ್ಲಿ ಆಗಿದೆ’ ಎಂದರು.

‘ಜಿಡಿಪಿಯಲ್ಲಿ (ತಲಾ ಆದಾಯ) ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಯ 3ನೇ ವರ್ಷದ ಸಂಭ್ರಮವನ್ನು, ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಆಚರಿಸೋಣ’ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ‘ಗ್ಯಾರಂಟಿ ಯೋಜನೆಗಳನ್ನು ಬಡವರು, ಸದುಪಯೋಗ ಪಡೆದುಕೊಳ್ಳಬೇಕು. ಉಳ್ಳವರು ಈ ಯೋಜನೆಗಳನ್ನು ತ್ಯಾಗ ಮಾಡಬೇಕು. ನಾನು ಮತ್ತು ನನ್ನ ಕುಟುಂಬದವರು, ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವುದಿಲ್ಲವೆಂದು ಪ್ರಮಾಣ ಮಾಡುತ್ತೇನೆ’ ಎಂದರು.

ಕರ್ನಾಟಕ ಜಾಗೃತಿ ಸಮಿತಿಯ ವಾಸು ಎಚ್. ಅವರು ‘ಗ್ಯಾರಂಟಿ ಯೋಜನೆಯಿಂದ ರಾಜ್ಯದದ ಆರ್ಥಿಕತೆ ಸುಧಾರಣೆ’ ಕುರಿತು ಉಪನ್ಯಾಸ ನೀಡಿದರು.

ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಯಾಸೀರ ಅಹ್ಮದ ಖಾನ್ ಪಠಾಣ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್‌ಪಿ ಯಶೋಧಾ ವಂಟಗೋಡಿ ಇದ್ದರು.

‘ಮಾಹಿತಿ ತಿಳಿಸಿದ ಮಳಿಗೆಗಳು’

ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಈವರೆಗೂ ಆಗಿರುವ ಅಭಿವೃದ್ದಿ ಬಗ್ಗೆ ಮಾಹಿತಿ ತಿಳಿಸುವ ಮಳಿಗೆಗಳು ಗಮನ ಸೆಳೆದವು. ಗೃಹಲಕ್ಷ್ಮಿ ಯೋಜನೆಯಡಿ ಬಂದ ಮಾಸಿಕ ₹ 2 ಸಾವಿರನ್ನು ಕೂಡಿಟ್ಟು ಸ್ವತಃ ಉದ್ಯೋಗ ಆರಂಭಿಸಿದ ಮಹಿಳೆಯರ ಜೀವನಗಾಥೆ ಮಾಹಿತಿಯೂ ಮಳಿಗೆಯಲ್ಲಿತ್ತು. ಮಹಿಳಾ ಸ್ವ–ಸಹಾಯ ಸಂಘದ ಸದಸ್ಯರು ತಯಾರಿಸಿದ ಕರಕುಶಲ ವಸ್ತುಗಳ ಮಾರಾಟಕ್ಕೂ ಮಳಿಗೆಯಲ್ಲಿ ಅವಕಾಶ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.