ADVERTISEMENT

ಹಿರೇಕೆರೂರು: ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಸಕ್ಕರೆ ಕಾರ್ಖಾನೆ ಜಮೀನಿನಲ್ಲಿ ಬಿಜೆಪಿ ಸಂಸದನ ಅಕ್ರಮ ಗಣಿಗಾರಿಕೆ: ಬನ್ನಿಕೋಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 2:50 IST
Last Updated 28 ಸೆಪ್ಟೆಂಬರ್ 2021, 2:50 IST
ಬೆಲೆ ಏರಿಕೆ ಖಂಡಿಸಿ ಹಿರೇಕೆರೂರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಮಾತನಾಡಿದರು
ಬೆಲೆ ಏರಿಕೆ ಖಂಡಿಸಿ ಹಿರೇಕೆರೂರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಮಾತನಾಡಿದರು   

ಹಿರೇಕೆರೂರು: ಗಗನಕ್ಕೇರಿರುವ ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ಬೀಜ- ಗೊಬ್ಬರಗಳ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಕೂಡಲೇ ಕಡಿಮೆ ಮಾಡಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಆಗ್ರಹಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಕೋವಿಡ್‌ನಿಂದ ಮೃತಪಟ್ಟವರಿಗೆ ಕೂಡಲೇ ಪರಿಹಾರ ನೀಡಬೇಕು. ರೈತ ವಿರೋಧಿ ಎಪಿಎಂಸಿ, ಕಂದಾಯ ಹಾಗೂ ಭೂ ಸುಧಾರಣಾ ಕಾನೂನುಗಳನ್ನು ರದ್ದುಪಡಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ನೀತಿ ಕೈಬಿಡಬೇಕು. ತುಂಗಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಮಾಡಿದ್ದು, ಕೂಡಲೇ ರೈತರಿಗೆ ಭೂ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಬಸವೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಮಾಪನಗೊಳಿಸಿ ಅದರ 226 ಎಕರೆಗೂ ಹೆಚ್ಚು ಜಮೀನನ್ನು ಬಿ.ಜೆ.ಪಿ. ಸಂಸದ ಜಿ.ಎಂ.ಸಿದ್ದೇಶ್ವರ ಕಂಪನಿಗೆ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ನೀಡಿ ಅನೇಕ ವರ್ಷಗಳಾಗಿವೆ. ಕಾರ್ಖಾನೆಯ ಕೆಲಸ ಪ್ರಾರಂಭಿಸದೆ, ಸದರಿ ಭೂಮಿಯಲ್ಲಿ ಅಂದಾಜು 30 ಎಕರೆ ಕ್ಷೇತ್ರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಸರ್ಕಾರದ ಸಂಪತ್ತು ಲೂಟಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿ.ಎಚ್.ಬನ್ನಿಕೋಡ, ಅಕ್ರಮ ಗಣಿಗಾರಿಕೆಗೆ ಸಹಾಯ ಸಹಕಾರ ಮಾಡಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಸ್ವಂತ ಅಭಿವೃದ್ಧಿ ಮಾಡಿಕೊಂಡವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಚಿಕ್ಕಕಬ್ಬಾರ, ಹಿರೇಕಬ್ಬಾರ, ಪುರದಕೇರಿ, ಚಟ್ನಳ್ಳಿ ಮತ್ತು ಕಿರಗೇರಿ ಗ್ರಾಮಗಳ 200ಕ್ಕೂ ಹೆಚ್ಚು ಬಡ ರೈತರ ಕೂಲಿ ಕಾರ್ಮಿಕರ ಕುಟುಂಬಗಳು ಸಕ್ಕರೆ ಕಾರ್ಖಾನೆಗೆ ಕೊಟ್ಟಿರುವ ಜಮೀನನ್ನು ಸುಮಾರು ಮೂರು ತಲೆಮಾರಿನಿಂದ ಅಕ್ರಮ ಸಾಗುವಳಿ ಮಾಡಿ ಉಪಜೀವನ ಸಾಗಿಸುತ್ತಿದ್ದು, ಅವರಿಗೆ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ ಮಡಿವಾಳರ, ಪಿ.ಡಿ.ಬಸನಗೌಡ್ರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಮಂಜುನಾಥ ತಂಬಾಕದ, ದಿಗ್ವಿಜಯ ಹತ್ತಿ, ಪ್ರಕಾಶ ಬನ್ನಿಕೋಡ, ಎ.ಕೆ.ಪಾಟೀಲ, ಎಸ್.ಬಿ.ತಿಪ್ಪಣ್ಣನವರ, ಬಿ.ಎನ್.ಬಣಕಾರ, ಎಚ್.ಎಸ್.ಕೋಣನವರ, ಶೇಕಣ್ಣ ಉಕ್ಕುಂದ, ದುರ್ಗಪ್ಪ ನೀರಲಗಿ, ವಸಂತ ದ್ಯಾವಕ್ಕಳವರ, ಸನಾವುಲ್ಲಾ ಮಕಾನದಾರ್, ಜೋತಿಬಾ ಜಾಧವ, ಸುರೇಶ ಮಡಿವಾಳರ, ವಿ.ಎನ್.ಮಡಿವಾಳರ, ಕೆಂಚಪ್ಪ ಕುರಿಯವರ, ಜಿ.ವಿ.ಕುಲಕರ್ಣಿ, ಸಲೀಂ ಮುಲ್ಲಾ, ವಿನಯ ಪಾಟೀಲ, ಆನಂದ ನಾಯ್ಕರ್, ರವೀಂದ್ರಗೌಡ ಪಾಟೀಲ, ಮಂಜು ಶಿವನಕ್ಕನವರ, ಪ್ರಶಾಂತ ತಿರಕಪ್ಪನವರ, ಬಸವರಾಜ ಪರಪ್ಪನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.