ADVERTISEMENT

ದೇಶದ ಅರಿವಿಲ್ಲದೇ, ಸಂವಿಧಾನ ಅರ್ಥವಾಗದು

ಸಂವಿಧಾನ ಓದು ಅಭಿಯಾನದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 14:00 IST
Last Updated 11 ಡಿಸೆಂಬರ್ 2018, 14:00 IST
ಹಾವೇರಿಯಲ್ಲಿ ಮಂಗಳವಾರ ನಡೆದ ಸಂವಿಧಾನ ಓದು ಅಭಿಯಾನಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರನ್ನು ವಿದ್ಯಾರ್ಥಿಗಳು, ಸಂಘಟಕರು ಬರಮಾಡಿಕೊಂಡರು
ಹಾವೇರಿಯಲ್ಲಿ ಮಂಗಳವಾರ ನಡೆದ ಸಂವಿಧಾನ ಓದು ಅಭಿಯಾನಕ್ಕೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರನ್ನು ವಿದ್ಯಾರ್ಥಿಗಳು, ಸಂಘಟಕರು ಬರಮಾಡಿಕೊಂಡರು   

ಹಾವೇರಿ:ಅಸಮಾನತೆ ತಿಳಿಯದವರಿಗೆ ದೇಶದ ಬಗ್ಗೆ ಅರಿವು ಇರುವುದಿಲ್ಲ. ದೇಶದ ಅರಿವಿಲ್ಲದಿದ್ದರೆ, ಸಂವಿಧಾನ ಅರ್ಥವೇ ಆಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಹೇಳಿದರು.

ನಗರದ ರಾಚೋಟೇಶ್ವರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ‘ಸಂವಿಧಾನ ಓದು ಅಭಿಯಾನ’ದಲ್ಲಿ ಅವರು ಮಾತನಾಡಿದರು.

ಪ್ರತಿ ಪ್ರಜೆಯು ಹುಟ್ಟಿನಿಂದ ಸಾವಿನ ತನಕ ಒಂದೊಂದು ಕಾನೂನಿನಿಂದ ಸಂರಕ್ಷಿಸಲ್ಪಡುತ್ತಾನೆ. ಈ ಕಾನೂನಾತ್ಮಕ ರಕ್ಷಣೆ ನೀಡುವ ಸಂವಿಧಾನವು ತಾಯಿ ಸಮಾನ. ಕೆಲವರು ತಾಯಿಯನ್ನೇ ಬದಲಾಯಿಸಲು ಹೊರಟ್ಟಿದ್ದಾರೆ. ಆದರೆ, ಸಂವಿಧಾನದ ತಿದ್ದುಪಡಿಗೆ ಅವಕಾಶ ಇದೆಯೇ ಹೊರತು, ಬದಲಾವಣೆಗಿಲ್ಲ ಎಂದರು.

ADVERTISEMENT

ಸಂವಿಧಾನ ಅರ್ಥವಾಗದಿರುವುದೇ ಸಾಂಸ್ಕೃತಿಕ ದಿವಾಳಿತನ. ಹೀಗಾಗಿ, ಅದರ ಉಲ್ಲಂಘನೆ, ಬದಲಾವಣೆ, ಸುಡುವುದು ಮತ್ತಿತರ ಘೋಷಣೆಗಳನ್ನು ಮಾಡುತ್ತಾರೆ. ಆದರೆ, ಅದರಲ್ಲಿ ಯಾವುದೇ ದೋಷಗಳಿಲ್ಲ. ದೋಷಗಳು ಉಂಟಾಗಿರುವುದು ಅನುಷ್ಠಾನದಲ್ಲಿ ಎಂದರು.

ದೇಶ ಎಂದರೆ ಭೂಮಿ ಮತ್ತು ನಾಲ್ಕು ದಿಕ್ಕಿನ ಗಡಿಗಳಲ್ಲ. ದೇಶವೆಂದರೆ ಜನರು. ಅದಕ್ಕೆ ಇತಿಹಾಸ, ಆರ್ಥಿಕ, ಸಾಮಾಜಿಕ ಸ್ಥಿತಿಗಳು, ಮೌಲ್ಯಗಳು, ಧರ್ಮಗಳು, ನಂಬಿಕೆಗಳು ಸೇರಿದಂತೆ ಸಾಕಷ್ಟು ವಿಚಾರಗಳಿವೆ. ಹೀಗಾಗಿ ಸರಳವಾಗಿ ಓದಲು ಸಂವಿಧಾನವು ಒಂದು ಕತೆ, ಕವನ, ಕಾಲ್ಪನಿಕ ಕೃತಿ ಆಗಿಲ್ಲ ಎಂದರು.

ಭಾರತ ಎಂದರೆ ಬಹುತ್ವ. ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಇತಿಹಾಸಗಳಿವೆ. ಕಾಲ ಕಾಲಕ್ಕೆ ದೇಶಕ್ಕೆ ಬಂದವರು ಇಲ್ಲೇ ನೆಲೆ ನಿಂತು ಭಾರತೀಯರಾದರು. ಪರಸ್ಪರ ಸಂಬಂಧ, ಸಂಪ್ರದಾಯ, ಜನಾಂಗ, ಜಾತಿ, ಧರ್ಮ, ಸಂಸ್ಕೃತಿಗಳ ಮಿಲನವೂ ಆಯಿತು. ಹೀಗಾಗಿ ‘ಬಹುತ್ವ’ ಇಲ್ಲದೇ ಭಾರತವೇ ಇಲ್ಲ ಎಂದರು.

ಸಾಹಿತಿ ಸತೀಶ ಕುಲಕರ್ಣಿ, ಅಭಿಯಾನದ ಸಂಚಾಲಕ ಡಾ.ವಿಠಲ ಭಂಡಾರಿ, ಕೆರಿಮತ್ತಿಹಳ್ಳಿ ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಪ್ರಶಾಂತ ಎಚ್.ವೈ, ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ಅಕ್ಷತಾ ಕೆ.ಸಿ., ಜಿಲ್ಲಾ ವಕೀಲರ ಸಂಘದ ಕೆ.ಸಿ. ಪಾವಲಿ, ಕಾರ್ಯದರ್ಶಿ ಪಿ.ಎಂ. ಬೆನ್ನೂರು, ಸೋಮಶೇಖರ ಕೋತಂಬರಿ, ವಿನಾಯಕ ಕುರುಬರ, ನಾರಾಯಣ ಕಾಳೆ, ಬಸವರಾಜ ಪೂಜಾರ, ಬಸವರಾಜ ಭೋವಿ, ಬಸವರಾಜ ಬಿ., ಹೊನ್ನಪ್ಪ ತಗಡಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.