
ಹಾವೇರಿ: ‘ನ. 14ರಿಂದ 20ರವರೆಗೆ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ’ ಆಚರಿಸಲಾಗುತ್ತಿದೆ. ಹಾವೇರಿಯಲ್ಲಿ ನ. 18ರಂದು ‘ಬೆಳಗಾವಿ ವಿಭಾಗ ಮಟ್ಟದ ಸಮಾವೇಶ’ ನಡೆಯಲಿದೆ’ ಎಂದು ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಕಲ್ಲಪ್ಪ ಓಬಣ್ಣಗೋಳ ತಿಳಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆತ್ಮ ನಿರ್ಭರ ಭಾರತ ಸಾಧನೆಗೆ ವಾಹಕಗಳಗಾಗಿ ಸಹಕಾರ ಸಂಸ್ಥೆಗಳು’ ಧ್ಯೇಯದಡಿ ‘ಸಹಕಾರ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ (ಕರಕುಶಲ, ಕೈಮಗ್ಗ, ಕಾರ್ಮಿಕ, ಮೀನುಗಾರಿಕೆ ಇತ್ಯಾದಿ)’ ವಿಷಯದಡಿ ಸಪ್ತಾಹ ರೂಪಿಸಲಾಗಿದೆ’ ಎಂದರು.
‘ರಜನಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ, ರಾಜ್ಯದ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. ಎಚ್.ವೈ. ಗದ್ದನಕೇರಿ ಅವರು ಉಪನ್ಯಾಸ ನೀಡಲಿದ್ದಾರೆ. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ 3,754 ಸಹಕಾರ ಸಂಘಗಳ ಸದಸ್ಯರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳದ ನೇತೃತ್ವದಲ್ಲಿ ಹಲವು ಸಹಕಾರ ಸಂಘಟನೆಗಳ ಸಹಯೋಗದಲ್ಲಿ ಏಳು ದಿನವೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.
ಹಾವೇರಿ ಹಾಲು ಒಕ್ಕೂಟದ (ಹಾವೆಮುಲ್) ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ‘ನಬಾರ್ಡ್ ನೆರವು ಕಡಿಮೆಯಾಗಿದ್ದು, ರೈತರಿಗೆ ಸಮರ್ಪಕವಾಗಿ ಸಾಲ ಸಿಗುತ್ತಿಲ್ಲ. ಸಮಾವೇಶದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಅರಬಗೊಂಡ ಮಾತನಾಡಿ, ‘ಹಾವೇರಿ ರೈಲ್ವೆ ನಿಲ್ದಾಣ ಬಳಿ ನೂತನ ಸಹಕಾರ ತರಬೇತಿ ಸಭಾಭವನ ಕಟ್ಟಡ ನಿರ್ಮಿಸಲಾಗಿದೆ. ನ. 18ರಂದು ಬೆಳಿಗ್ಗೆ 10.30 ಗಂಟೆಗೆ ಸಚಿವ ಶಿವಾನಂದ ಪಾಟೀಲ ಕಟ್ಟಡ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ‘ಹಾವೇರಿಯಲ್ಲಿ ಡಿಸಿಸಿ ಬ್ಯಾಂಕ್ ಪ್ರಾದೇಶಿಕ ಕಚೇರಿ ಆರಂಭಿಸಲಾಗಿದ್ದು, ಇದರ ಉದ್ಘಾಟನೆಗೆ ತಯಾರಿ ನಡೆಸಲಾಗುತ್ತಿದೆ. ₹ 10 ಲಕ್ಷದೊಳಗಿನ ಸಾಲದ ಅರ್ಜಿಗಳನ್ನು ಇಲ್ಲಿಯೇ ಪರಿಶೀಲಿಸಲು ಅವಕಾಶವಿದೆ’ ಎಂದರು.
ಮಹಾಮಂಡಳದ ನಿರ್ದೇಶಕ ಸಂಜಯ್ ಹೊಸಮಠ, ಹಾವೇರಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಿವಾನಂದ ಸಂಗಾಪುರ, ಹಾವೇರಿ ಸಹಕಾರ ಸಂಘಗಳ ಉಪನಿಬಂಧಕ ಅಜ್ಮತ್ ಉಲ್ಲಾದ್ ಖಾನ್, ಮೂಕಾನಿ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಪುಂಡಲೀಕ ಕೆರೂರ, ಹಾವೆಮುಲ್ ನಿರ್ದೇಶಕ ಬಸವೇಶಗೌಡ ಪಾಟೀಲ, ಹಾವೇರಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಕುಲಕರ್ಣಿ, ಸವಣೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಜಿ. ಸುಣಗಾರ ಹಾಗೂ ಇತರರು ಇದ್ದರು.
‘₹ 348 ಕೋಟಿ ಅಲ್ಪಾವಧಿ ಸಾಲ’
‘ಧಾರವಾಡ ಗದಗ ಹಾಗೂ ಹಾವೇರಿ ಮೂರು ಜಿಲ್ಲೆಗಳಲ್ಲಿ 2025 ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗೆ 45664 ಮಂದಿಗೆ ₹ 348 ಕೋಟಿ ಅಲ್ಪಾವಧಿ ಸಾಲ ನೀಡಲಾಗಿದೆ. 589 ಮಂದಿಗೆ ₹ 36 ಕೋಟಿ ಮಧ್ಯಮಾವಧಿ ಸಾಲ ಹಾಗೂ 1237 ಮಂದಿಗೆ 21 ಕೋಟಿ ದೀರ್ಘಾವಧಿ ಸಾಲ ನೀಡಲಾಗಿದೆ’ ಎಂದು ಕಲ್ಲಪ್ಪ ಓಬಣ್ಣಗೋಳ ಮಾಹಿತಿ ನೀಡಿದರು. ‘ರಾಜ್ಯದಲ್ಲಿ 47000 ಸಹಕಾರ ಸಂಘಗಳಿದ್ದು 2.72 ಕೋಟಿ ಸದಸ್ಯರಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 1423 ಸಂಘಗಳಿದ್ದು 5.69 ಲಕ್ಷ ಸದಸ್ಯರಿದ್ದಾರೆ. ರಾಷ್ಟ್ರದ ಜಿಡಿಪಿಗೂ ಮಹತ್ವದ ಕೊಡುಗೆ ನೀಡುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.