ADVERTISEMENT

ಶಿಗ್ಗಾವಿ: ಸಂಪೂರ್ಣ ಮೆಕ್ಕೆಜೋಳ ಖರೀದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:37 IST
Last Updated 8 ಡಿಸೆಂಬರ್ 2025, 2:37 IST
<div class="paragraphs"><p><strong>ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ನಾಕಾ ಬಂದ್ ಮಾಡಿ ರೈತರು ಗೋವಿನಜೋಳ ಬೆಲೆ ನಿಗದಿ ಪಡಿಸಲು ಮತ್ತು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.</strong></p></div>

ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ನಾಕಾ ಬಂದ್ ಮಾಡಿ ರೈತರು ಗೋವಿನಜೋಳ ಬೆಲೆ ನಿಗದಿ ಪಡಿಸಲು ಮತ್ತು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

   

ಶಿಗ್ಗಾವಿ: ರೈತರು ಬೆಳೆದ ಗೋವಿನಜೋಳದ ಬೆಳೆಗೆ ಬೆಲೆ ನಿಗದಿಪಡಿಸಬೇಕು ಮತ್ತು ಕರೀದಿ ಕೇಂದ್ರಗಳನ್ನು ಆರಂಬಿಸಬೇಕೆಂದು ಆಗ್ರಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಪದಾಧಿಕಾರಿಗಳು ಮತ್ತು ರೈತರು ಭಾನುವಾರ ತಾಲ್ಲೂಕಿನ ಬಂಕಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ನಾಕಾ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಈಗಾಗಲೇ ಜಿಲ್ಲೆಯಲ್ಲಿ ದಲಾಳಿಗಳು ಗೋವಿನಜೋಳವನ್ನು ₹ 1600 ನೂರರಿಂದ ₹ 1800 ನೂರರವರೆಗೆ ಖರೀದಿ ಮಾಡುತ್ತಿದ್ದಾರೆ.

ADVERTISEMENT

ಅದರಿಂದ ರೈತ ಸಮೂಹಕ್ಕೆ ಅನ್ಯಾಯವಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರ ಎಂ.ಎಸ್.ಪಿ ಬೆಂಬಲ ಬೆಲೆ ₹ 2400 ನಿಗದಿ ಪಡಿಸಿದೆ.

ಅದರಂತೆ ರಾಜ್ಯ ಸರ್ಕಾರ ಅದಕ್ಕೆ ₹ 600 ಪ್ರೋತ್ಸಾಹ ಧನ ಹಾಕಿ ಒಟ್ಟು 3 ಸಾವಿರ ಕ್ವಿಂಟಲ್ ಖರೀದಿಸಬೇಕು. ರಾಜ್ಯದಲ್ಲಿ ಅಂದಾಜು 53 ಲಕ್ಷ ಮೆಟ್ರಿಕ್ ಟನ್ ಗೋವಿನಜೋಳ ಬೆಳೆಯಲಾಗಿದೆ. ಆದರೆ ರಾಜ್ಯ ಸರ್ಕಾರ ಅದರಲ್ಲಿ ಬರಿ 10 ಲಕ್ಷ ಮೆಟ್ರಿಕ್ ಟನ್ ಖರೀದಿಸಲು ಮುಂದಾಗಿದೆ. ಅದರಿಂದ ಉಳಿದ ರೈತರಿಗೆ ಅನ್ಯಾಯವಾಗುತ್ತಿದೆ.

ರೈತರು ಬೆಳೆದ ಗೋವಿನಜೋಳವನ್ನು ಸಂಪೂರ್ಣವಾಗಿ ಖರೀದಿಸಬೇಕು ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು. 

ಜಿಲ್ಲೆಯ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಪ್ರತ್ಯೇಕ ರೀಕವರಿ ಲ್ಯಾಬ್ ಸ್ಪಾಪಿಸಬೇಕು. ಪ್ರತಿ ಕಾರ್ಖಾನೆ ಎದುರಿಗೆ ತೂಕದ ಯಂತ್ರ (ವೇ ಬ್ರಿಜ್) ಸ್ಥಾಪಿಸಬೇಕು. ಶಿಗ್ಗಾವಿ ತಾಲ್ಲೂಕಿನ ಅಂಬುಜಾ ಕಾರ್ಖಾನೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕಾರ್ಖಾನೆ ಎದುರಿಗೆ ಮೌಷರ್ ಮಷಿನ್‌ ಅನ್ನು ರೈತರ ಎದುರುಗಡೆ ಚೆಕ್ ಮಾಡುವ ವ್ಯವಸ್ಥೆ ಅವಶ್ಯಕವಾಗಿದೆ ಎಂದು ದೂರಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಕಲ್ಮೇಶ ಲಿಗಾಡೆ, ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡೂರ, ಜಿಲ್ಲಾ ಕಾರ್ಯದರ್ಶಿ ರುದ್ರಪ್ಪ ಬಳಿಗಾರ, ಮುಖಂಡರಾದ ಆನಂದ ಕೆಳಗಿನಮನಿ, ಶಂಕರಗೌಡ್ರ ಪಾಟೀಲ, ದೇವೇಂದ್ರಪ್ಪ ಹಳವಳ್ಳಿ, ರಮೇಶ ಜೋಳದ, ರಾಜು ಸಂಶಿ, ರಾಜು ಗಂಜೀಗಟ್ಟಿ, ದಯಾನಂದ ಮೆಣಸಿನಕಾಯಿ, ದೇವರಾಜ ದೊಡ್ಡಮನಿ, ಹನುಮಂತ ಹರಿಜನ, ಗದಿಗೆಪ್ಪ ದೊಡ್ಡಮನಿ, ಶಿವಾಜಿ ಶಿವಾಜಿ, ಶಂಭು ಕುರಗೋಡಿ, ಮಾಲತೇಶ ಕೋರಿ, ಸಿದ್ದಪ್ಪ ಹರವಿ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ಅಧ್ಯಕ್ಷರು, ಸಂಘದ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯೋತ್ಸವದ ಮಧ್ಯೆ ಅಸಮಾಧಾನ

ಒಂದು ಖಾತೆಗೆ 50 ಕ್ವಿಂಟಲ್‌ದಂತೆ ₹ 2400 ದರದಂತೆ ಖರೀದಿ ಮಾಡಲು ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಅದರಿಂದಾಗಿ ಪ್ರತಿಭಟನೆ ಹಿಂಪಡೆದು ಸರ್ಕಾರದ ವಿರುದ್ಧ ಘೋಷಣೆ ಹಾಕುವ ರೈತರು ಪ್ರತಿಭಟನೆ ಬಿಟ್ಟು ಜಯಕಾರ ಹಾಕಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿಕೆ ನಾಶ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

‘ಸರ್ಕಾರ ರೈತರ ಹೋರಾಟ ಹತ್ತಿಕ್ಕುವ ಯತ್ನ ನಡೆಸಿದ್ದು, ಸರ್ಕಾರದ ಘೋಷಣೆ ತೃಪ್ತಿ ತಂದಿಲ್ಲ. ಅದರಿಂದ ಅಧಿಕ ಬೆಳೆ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ. ರೈತ ಬೆಳೆದ ಸಂಪೂರ್ಣ ಬೆಳೆಯನ್ನು ಸರ್ಕಾರ ಕ್ವಿಂಟಲ್‌ಗೆ ₹ 3 ಸಾವಿರ ದರಲ್ಲಿ ಖರೀದಿಸಬೇಕು. ಇಲ್ಲವಾದಲ್ಲಿ ಜ.10 ರಂದು ಬೆಳಗಾವಿ ಚಲೋ ನಡೆಯಲಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚನವರ ತಿಳಿಸಿದರು.

ಸಂಚಾರಕ್ಕೆ ಜನರ ಪರದಾಟ

‘ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನಿಗದಿಯಾಗುತ್ತಿಲ್ಲ. ಅತಿವೃಷ್ಟಿ, ಅನಾವೃಷ್ಟಿಯಿಂದ ಪ್ರತಿ ವರ್ಷ ರೈತರು ಹಾನಿ ಅನುಭವಿಸುತ್ತಿದ್ದಾರೆ. ಅದರಿಂದ ಮುಂಗಾರು ಬೆಳೆ ಹಾನಿ, ಬೆಳೆ ವಿಮೆವರೆಗೆ ಮಂಜೂರಾಗಿಲ್ಲ. ಮತ್ತೆ ಹಿಂಗಾರು ಬೆಳೆ ಸಹ ಹಾನಿಯಾಗಿದೆ. ಹೀಗಾಗಿ ವರ್ಷವೀಡಿ ರೈತ ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ರೈತನ ನೆರವಿಗೆ ಬರಬೇಕು ಎಂದು ರೈತ ಮುಖಂಡ ಶಂಕ್ರಗೌಡ ಪಾಟೀಲ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆ 10ಗಂಟೆಯಿಂದ ಟೋಲ್ ನಾಕಾ ಬಳಿ ಆರಂಭವಾದ ರೈತರ ಪ್ರತಿಭಟನೆ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಸುಮಾರು 15 ನಿಮಿಷ ಟೋಲ್ ನಾಕಾ ಗೇಟ್‌ಗಳನ್ನು ಬಂದ್ ಮಾಡಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೋಗಿದರು.

ಟೋಲ್ ನಾಕಾ ಬಂದ್ ಮಾಡಿರುವ ಸಂದರ್ಭದಲ್ಲಿ ಎರಡು ಬದಿಗೆ ನಿಂತಿರುವ ವಾಹನಗಳಲ್ಲಿನ ದೂರದ ಪ್ರಯಾಣಿಕರು ಸಂಚಾರಕ್ಕಾಗಿ ಪರದಾಡಿದರು. ನೀರು, ಆಹಾರಕ್ಕಾಗಿ ಹತ್ತಿರದ ಡಾಭಾಗಳಿಗೆ, ಚಹಾದ ಅಂಗಡಿಗಳಿಗೆ ಮುಗಿಬಿದ್ದರುವುದು ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.