ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಡಿಯೊ ಕಾನ್ಫರೆನ್ಸ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:52 IST
Last Updated 7 ಏಪ್ರಿಲ್ 2020, 15:52 IST
   

ಹಾವೇರಿ: ಕೋವಿಡ್-19 ನಿಯಂತ್ರಣ ಕುರಿತಂತೆ ಜಿಲ್ಲಾಡಳಿತದೊಂದಿಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿದರು. ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಗೃಹ ಸಚಿವ ಬೊಮ್ಮಾಯಿ ಅವರು ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡದಂತೆ ಮತ್ತಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.

ಹೊರ ಜಿಲ್ಲೆಗಳನ್ನು ಸಂಪರ್ಕಿಸುವ ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಚೆಕ್‌ಪೊಸ್ಟ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿ. ಸರಕು ಸಾಗಾಣಿಕೆ ಹೊರುಪಡಿಸಿ ಹೊರ ಜಿಲ್ಲೆಯಿಂದ ಪ್ರಯಾಣಿಕರು ಕಾರಣವಿಲ್ಲದೆ ಪ್ರವೇಶಿಸುವ ಕುರಿತಂತೆ ನಿರ್ಬಂಧ ಹೇರಿ ಲಾಕ್‍ಡೌನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ. ಗಡಿಭಾಗದ ಎಲ್ಲ ಚೆಕ್‍ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಂದು ಸೂಚನೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ತೀವ್ರ ನಿಗಾವಹಿಸಿ. ದೆಹಲಿ ಸೇರಿದಂತೆ ರಾಜ್ಯದ ವಿವಿಧ ಭಾಗ, ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ದಿನಕ್ಕೆರಡು ಬಾರಿ ಕೈಗೊಳ್ಳಿ. ಮಾಹಿತಿ ನೀಡದೇ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಹೊರ ರಾಜ್ಯ ಹಾಗೂ ವಿದೇಶದಿಂದ ಬಂದವರ ಮಾಹಿತಿ ಕಲೆ ಹಾಕಲು ಕ್ರಮವಹಿಸಿ ಎಂದರು.

ಎಸ್‌ಡಿಆರ್‌ಎಫ್‌ ಅನುದಾನ ಬಳಸಿ

ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿರುವ ವಿಶೇಷ ವಾರ್ಡ್‍ಗಳಿಗೆ ಕೇಂದ್ರೀಕೃತ ವೆಂಟಿಲೇಷನ್ ವ್ಯವಸ್ಥೆಯನ್ನು ಕೈಗೊಳ್ಳಿ. ಕನಿಷ್ಠ ಹತ್ತು ಹಾಸಿಗೆಗಳಿಗೆ ಏಕ ವ್ಯವಸ್ಥೆಯಲ್ಲಿ ಆ್ಯಕ್ಸಿಜನ್ ಪೂರೈಕೆಯಾಗಬೇಕು. ಇದಕ್ಕೆ ಬೇಕಾದ ವೆಚ್ಚ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ಎಸ್.ಡಿ.ಆರ್.ಎಫ್. ಅನುದಾನ ಬಳಕೆ ಮಾಡಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕೃಷಿ ಬಿತ್ತನೆಗೆ ಅಗತ್ಯವಾದ ಬೀಜ ಹಾಗೂ ಗೊಬ್ಬರಗಳ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ವಿಶೇಷವಾಗಿ ಯೂರಿಯಾ ಗೊಬ್ಬರದ ಅಭಾವವಾಗದಂತೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಬೀಜ ಗೊಬ್ಬರಗಳ ವಿತರಣೆಯಲ್ಲಿ ಯಾವುದೇ ಗೊಂದಲವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಎಸ್ಪಿ ಕೆ.ಜಿ.ದೇವರಾಜ, ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಡಿಎಚ್‌ಒ ಡಾ.ರಾಜೇಂದ್ರ ದೊಡ್ಡಮನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪ ವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಅನ್ನಪೂರ್ಣ ಮುದಕಮ್ಮನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.