ADVERTISEMENT

ಹಾವೇರಿ | ಪೊಲೀಸ್‌ ಸೇರಿ 36 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 1925ಕ್ಕೆ ಏರಿಕೆಯಾದ ಪ್ರಕರಣಗಳು: 139 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:28 IST
Last Updated 11 ಆಗಸ್ಟ್ 2020, 14:28 IST
ಹಾವೇರಿ ಜಿಲ್ಲಾಸ್ಪತ್ರೆ
ಹಾವೇರಿ ಜಿಲ್ಲಾಸ್ಪತ್ರೆ   

ಹಾವೇರಿ: ಕೆವಿಜಿ ಬ್ಯಾಂಕ್ ಮ್ಯಾನೇಜರ್‌, ಕೆ.ಎಸ್.ಆರ್.ಪಿ. ಸಿಬ್ಬಂದಿ, ಬಿಸಿಎಂ ಇಲಾಖೆ ವಾಹನ ಚಾಲಕ, ಗ್ರಾಮ ವಿದ್ಯುತ್ ಪ್ರತಿನಿಧಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 36 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 139 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1925 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1237 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಮಂಗಳವಾರ ಮೂವರ ಸಾವು ಸೇರಿ ಒಟ್ಟಾರೆ 42 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 646 ಸಕ್ರಿಯ ಪ್ರಕರಣಗಳಿವೆ.

ಮಂಗಳವಾರ ದೃಢಗೊಂಡ ಪ್ರಕರಣಗಳಲ್ಲಿ ಹಾವೇರಿ-10, ರಾಣೆಬೆನ್ನೂರು-7, ಶಿಗ್ಗಾವಿ, ಹಾನಗಲ್ ಹಾಗೂ ಹಿರೇಕೆರೂರಿನಲ್ಲಿ ತಲಾ 5 , ಸವಣೂರು-4 ಮಂದಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಗುಣಮುಖ:ಕೋವಿಡ್‍ನಿಂದ ಗುಣಮುಖರಾಗಿ ರಾಣೆಬೆನ್ನೂರು-76, ಹಿರೇಕೆರೂರು-27, ಹಾವೇರಿ-19, ಬ್ಯಾಡಗಿ-14 ಹಾಗೂ ಹಾನಗಲ್ ತಾಲ್ಲೂಕಿನ ಮೂವರು ಬಿಡುಗಡೆ ಹೊಂದಿದ್ದಾರೆ.

ಸೋಂಕಿತರ ವಿವರ:ಹಾವೇರಿ ಪಟ್ಟಣ, ಬೆಳವಗಿ, ಕನವಳ್ಳಿ, ಕೋಳೂರು, ನಾಗನೂರ ಗ್ರಾಮ, ರಾಣೆಬೆನ್ನೂರ ಪಟ್ಟಣ ಹಾಗೂ ಅರೇಮಲ್ಲಾಪೂರದಲ್ಲಿ 1, ಅಕ್ಕಿಆಲೂರು-2, ಹಾನಗಲ್, ಶಂಕ್ರಿಕೊಪ್ಪ, ಡೊಳ್ಳಶ್ವರದಲ್ಲಿ ತಲಾ ಒಂದು ಪ್ರಕರಣ, ಶಿಗ್ಗಾವಿ ಹಾಗೂ ಗಂಗೀಬಾವಿ ಗ್ರಾಮದಲ್ಲಿ ಒಂದು ಪ್ರಕರಣ, ತೆವರಮೆಳ್ಳಿಹಳ್ಳಿ-2, ಚಿಲ್ಲೂರಬಡ್ನಿ, ಹಿರೇಮೆಳ್ಳಿಹಳ್ಳಿ ತಲಾ ಒಂದು ಪ್ರಕರಣ, ರಟ್ಟೀಹಳ್ಳಿಯಲ್ಲಿ-3, ಹಿರೇಕೆರೂರು, ಹಿರೇಮೊರಬದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಮರಣದ ವಿವರ:ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ 42 ಪುರುಷ (ಪಿ-194147) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 7ರಂದು ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.

ಹಾವೇರಿ ನಗರದ ಪುರದ ಓಣಿಯ 70 ವರ್ಷದ ಮಹಿಳೆ (ಪಿ-194153) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.

ರಾಣೆಬೆನ್ನೂರ ತಾಲ್ಲೂಕು ಉಮಾಶಂಕರ ನಗರದ 62 ವರ್ಷದ ಮಹಿಳೆ (ಪಿ-1119878) ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 24ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಜುಲೈ 26ರಂದು ಮೃತಪಟ್ಟಿದ್ದಾರೆ. ಮೂವರ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ನೆರವೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.