ADVERTISEMENT

ಹಾವೇರಿ: ಪಿಡಿಒ ಸೇರಿ 6 ಮಂದಿಗೆ ಕೋವಿಡ್‌-19, ಸೋಂಕಿತರ ಸಂಖ್ಯೆ 308ಕ್ಕೆ ಏರಿಕೆ

ವ್ಯಕ್ತಿ ಸಾವು, 33 ಮಂದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 17:27 IST
Last Updated 13 ಜುಲೈ 2020, 17:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಜಿಲ್ಲೆಯಲ್ಲಿ ಮೇವುಂಡಿ ಪಿಡಿಒ ಸೇರಿದಂತೆಸೋಮವಾರ ಆರು ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಒಬ್ಬರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. 33 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದುಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 308 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 170 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. 131 ಪ್ರಕರಣಗಳು ಸಕ್ರಿಯವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಹಾವೇರಿ ತಾಲ್ಲೂಕು ನೀರಲಗಿ ಗ್ರಾಮದ 36 ವರ್ಷದ ಪುರುಷ (ಎಚ್.ವಿ.ಆರ್.-301 ಐ.ಎಲ್.ಐ ಲಕ್ಷಣ), ಹೊಸರಿತ್ತಿ ಕುರುಬರ ಓಣಿಯ 41 ವರ್ಷದ ಪುರುಷ (ಎಚ್.ವಿ.ಆರ್.302 ಐ.ಎಲ್.ಐ ಲಕ್ಷಣ), ಹಾವೇರಿ ನಗರ ವೈಭವಲಕ್ಷ್ಮೀ ಪಾರ್ಕ್ ನಿವಾಸಿ 49 ವರ್ಷದ ಪುರುಷ (ಎಚ್.ವಿ.ಆರ್-304 ಐ.ಎಲ್.ಐ ಲಕ್ಷಣ), ಪಿ-31721 ಪ್ರಾಥಮಿಕ ಸಂಪರ್ಕದ ಮೇವುಂಡಿ ಪಿಡಿಒ ಹಾವೇರಿ ಶಿವಬಸವೇಶ್ವರ ನಗರದ ನಿವಾಸಿ 39 ವರ್ಷದ ಮಹಿಳೆ (ಎಚ್.ವಿ.ಆರ್.305) ಹಾಗೂ ವೆಂಕಟಾಪುರ ಗ್ರಾಮದ 37 ವರ್ಷದ ಪುರುಷ (ಎಚ್.ವಿ.ಆರ್.-306 ಐ.ಎಲ್.ಐ ಲಕ್ಷಣ) ಸೋಂಕು ದೃಢಗೊಂಡಿದೆ.

ADVERTISEMENT

ಸದರಿ ಸೋಂಕಿತರ ಗಂಟಲು ದ್ರವದ ಮಾದರಿಯನ್ನು ಕ್ರಮವಾಗಿ ಜುಲೈ 7, 8 ಹಾಗೂ 9ರಂದು ಲ್ಯಾಬ್‍ಗೆ ಕಳುಹಿಸಲಾಗಿತ್ತು . ಜುಲೈ 12ರಂದು ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸಾವು: ಸವಣೂರಿನ ಮಾಸೂರ ನಗರದ 45 ವರ್ಷದ ಪುರುಷ (ಎಚ್.ವಿ.ಆರ್.303) ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಜುಲೈ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 10ರಂದು ಮರಣ ಹೊಂದಿರುತ್ತಾರೆ. ಆ ದಿನವೇ ಇವರ ಗಂಟಲು ದ್ರವವನ್ನು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಜುಲೈ 12ರಂದು ಪಾಸಿಟಿವ್ ಎಂದು ದೃಡಪಟ್ಟಿರುತ್ತದೆ.

ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್‌ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಸೋಂಕಿತರ ನಗರ ಪ್ರದೇಶದ ನಿವಾಸದ 200 ಮೀಟರ್‌ ಪ್ರದೇಶ ಹಾಗೂ ನೀರಲಗಿ, ಹೊಸರಿತ್ತಿ ವೆಂಕಟಾಪುರ ಗ್ರಾಮಗಳನ್ನು ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.