ADVERTISEMENT

ವಿದೇಶದಿಂದ ಬಂದ 10 ಮಂದಿಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 10:55 IST
Last Updated 14 ಮಾರ್ಚ್ 2020, 10:55 IST
   

ಹಾವೇರಿ: ವಿದೇಶದಿಂದ ಜಿಲ್ಲೆಗೆ ಬಂದ ಒಟ್ಟು 10 ಮಂದಿಯನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, 14 ದಿನಗಳವರೆಗೆ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಶಾಸಕ ನೆಹರು ಓಲೇಕಾರ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದುಬೈನಿಂದ ಐವರು, ಸೌದಿ ಅರೇಬಿಯಾದ ಬಹ್ರೇನ್‌ನಿಂದ ಇಬ್ಬರು, ಕೌಲಾಲಂಪುರ, ಕಠ್ಮಂಡು ಮತ್ತು ಜಪಾನ್‌ನಿಂದ ತಲಾ ಒಬ್ಬರು ಸೇರಿದಂತೆ ಒಟ್ಟು 10 ಮಂದಿ ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸಿರುವ ಮಾಹಿತಿಯನ್ನು ವಿಮಾನ ನಿಲ್ದಾಣದ ಸಿಬ್ಬಂದಿ ನೀಡಿದ್ದಾರೆ. ತಕ್ಷಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದುವರೆಗೂ ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.

ಕೋಳಿ, ಕುರಿ ಮಾಂಸ ಮಾರಾಟ ಬಂದ್‌

ADVERTISEMENT

ಈಗಾಗಲೇ ತಹಶೀಲ್ದಾರ್‌ ಅವರು ಗ್ರಾಮ ಪಂಚಾಯ್ತಿಗಳಿಗೆ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಬೇಕು ಮತ್ತು ಔಷಧ ಸಿಂಪಡಣೆ ಮಾಡಬೇಕು ಎಂದು ತಿಳಿಸಿದ್ದಾರೆ. ನಗರದಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಕೋಳಿ, ಕುರಿ ಮಾಂಸ ಮಾರಾಟ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಇವುಗಳ ಮಾಂಸ ತಿನ್ನಬಾರದು. ಮದುವೆ, ಜಾತ್ರೆ, ಹಬ್ಬಗಳನ್ನು ಮುಂದೂಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ 9 ಹಾಸಿಗೆಗಳ 3 ವಿಶೇಷ ವಾರ್ಡ್‌ಗಳನ್ನು ತೆರೆದಿದ್ದು, ರೋಗ ಲಕ್ಷಣ ಕಂಡು ಬಂದರೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 1114 ಎನ್‌–95 ಮಾಸ್ಕ್‌ಗಳು ಮತ್ತು 3551 ಮಾತ್ರೆಗಳು ದಾಸ್ತಾನು ಇವೆ ಎಂದರು.

ಕಾಣದ ವೈದ್ಯಕೀಯ ಟೆಂಟ್‌

ಜಿಲ್ಲಾಕೇಂದ್ರದ ರೈಲ್ವೆ ಸ್ಟೇಷನ್‌ ಮತ್ತು ಬಸ್‌ ನಿಲ್ದಾಣದಲ್ಲಿ ತಾತ್ಕಾಲಿಕ ವೈದ್ಯಕೀಯ ಟೆಂಟ್‌ಗಳನ್ನು ಹಾಕಲಾಗಿದೆ ಎಂದು ಹೇಳಿಕೆ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಯಾವುದೇ ಟೆಂಟ್‌ಗಳು ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಕೂಡಲೇ ಮೂವರು ನರ್ಸಿಂಗ್‌ ವಿದ್ಯಾರ್ಥಿಗಳು ಮತ್ತು ಟ್ಯೂಟರ್‌ ಒಳಗೊಂಡ ತಂಡವನ್ನು ಎರಡೂ ಕಡೆ ವ್ಯವಸ್ಥೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗೆ ಶಾಸಕರು ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ರಾಜೇಂದ್ರ ದೊಡ್ಡಮನಿ ಮಾತನಾಡಿ, ‘ಎಲ್ಲ ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಯವರಿಗೆ ತರಬೇತಿ ನೀಡಲಾಗಿದೆ. ಎಲ್ಲ ತಾಲ್ಲೂಕುಗಳಿಗೆ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ನೀಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಆರೋಗ್ಯ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ವಿತರಿಸಲು ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.