ADVERTISEMENT

ಬ್ಯಾಡಗಿ: ಕೋವಿಡ್ ಆಸ್ಪತ್ರೆ ಕಾರ್ಯಾರಂಭ

50 ಹಾಸಿಗೆಯ ಆಸ್ಪತ್ರೆ, ಆಕ್ಸಿಜನ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:35 IST
Last Updated 21 ಸೆಪ್ಟೆಂಬರ್ 2020, 1:35 IST
ಬ್ಯಾಡಗಿಯಲ್ಲಿ 50 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿ ಮಾತನಾಡಿದರು
ಬ್ಯಾಡಗಿಯಲ್ಲಿ 50 ಹಾಸಿಗೆಯ ಕೋವಿಡ್ ಆಸ್ಪತ್ರೆಯನ್ನು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿ ಮಾತನಾಡಿದರು   

ಬ್ಯಾಡಗಿ: ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಹಾಗೂ ಸೋಂಕಿನಿಂದ ಅಪಾಯಕ್ಕೆ ಒಳಗಾದವರಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಕೋವಿಡ್ ಆಸ್ಪತ್ರೆಯನ್ನು ಆರಂಭಿಸಲಾಗಿದ್ದು, ಸೋಂಕಿನಿಂದ ತೊಂದರೆಗೊಳಗಾದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ₹70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಬಡ ರೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಇಲ್ಲಿರುವ ಸಿಬ್ಬಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಹೆಸರು ಮಾಡಿದೆ. ಸೋಂಕಿತರು ಭಯ ಪಡದೆ ಧೈರ್ಯದಿಂದ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ತಪ್ಪು ಸಂದೇಶಗಳಿಗೆ ಕಿವಿಗೊಡದೆ ಮುಖಕ್ಕೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.

ADVERTISEMENT

ಆಕ್ಸಿಜನ್ ವಿತರಣಾ ಕೇಂದ್ರ ಉದ್ಘಾಟಿಸಿದ ಜಿಲ್ಲಾಧಿಕಾರಿ ಸಂಜೀವ ಶೆಟ್ಟೆಣ್ಣನವರ ಮಾತನಾಡಿ, ಕಾಯಿಲೆ ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಾಗುವುದಕ್ಕಿಂತ ಮೊದಲು ಜಾಗೃತರಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವೆಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೀಶ್ವರ ಮಾತನಾಡಿ, ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿಕೊಂಡವರಿಗೆ ಪಾಸಿಟಿವ್ ಬರುತ್ತದೆಂದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಸಂದೇಶನ್ನು ನಂಬಬಾರದು ಎಂದರು.

ಹರಿಹರದ ಗ್ರಾಸಿಂ ಕಂಪನಿ ನಿತ್ಯ 30 ಟನ್ ಆಕ್ಸಿಜನ್‌ ಉತ್ಪಾದಿಸುತ್ತಿದ್ದು, ಯಾವುದೇ ಕೊರತೆಯಾಗಲಾರದು. ಪ್ರತ್ಯೇಕವಾಗಿ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುವ ಸೊಂಕಿತರಿಗೆ ಅಗತ್ಯ ಔಷಧ ಹೊಂದಿರುವ ಕಿಟ್ ನೀಡಲಾಗುವುದೆಂದು ಅವರು ಹೇಳಿದರು. ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಸಿ ಅವರು ಇ.ಸಿ.ಜಿ ಕಿಟ್‌ಗಳನ್ನು ವೈದ್ಯರಿಗೆ ಹಸ್ತಾಂತರಿಸಿದರು. ತಹಶೀಲ್ದಾರ್ ಶರಣಮ್ಮಾ ಕಾರಿ, ಡಿಎಚ್ಒ ಡಾ.ರಾಜೇಂದ್ರ ದೊಡ್ಡಮನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಶೀಲಾ ಖಾರ್ವಿ, ಡಾ. ವಿರೇಶ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುರೇಶ ಯತ್ನಳ್ಳಿ, ವಿರೇಂದ್ರ ಶೆಟ್ಟರ,
ಶಶಿಕಲಾ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.