ADVERTISEMENT

ತಡಸ: ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ

ಹಾನಗಲ್–ತಡಸ ರಾಜ್ಯ ಹೆದ್ದಾರಿ ತಡೆ ನಡೆಸಿ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:40 IST
Last Updated 22 ಆಗಸ್ಟ್ 2025, 2:40 IST
ತಡಸ ಸಮೀಪದ ದುಂಡಶಿ ರೈತ ಸಂಪರ್ಕ ಕೇಂದ್ರದ ಬಳಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೆಜ್ಲಿ ಅವರಿಗೆ ರೈತರು ಗುರುವಾರ ಮನವಿ ಸಲ್ಲಿಸಿದರು
ತಡಸ ಸಮೀಪದ ದುಂಡಶಿ ರೈತ ಸಂಪರ್ಕ ಕೇಂದ್ರದ ಬಳಿ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೆಜ್ಲಿ ಅವರಿಗೆ ರೈತರು ಗುರುವಾರ ಮನವಿ ಸಲ್ಲಿಸಿದರು   

ತಡಸ: ಸಮೀಪದ ದುಂಡಶಿ ಹೋಬಳಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ನೀಡಬೇಕು ಹಾಗೂ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಗೋವಿನಜೋಳ ಬೆಳೆಗೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ 25ರಷ್ಟು ಹಣ ನೀಡಬೇಕು ಎಂದು ಆಗ್ರಹಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಹಾನಗಲ್–ತಡಸ ರಾಜ್ಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರ ತಡೆದ ನಂತರ ದುಂಡಶಿ ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಈಶ್ವರಗೌಡ ಪಾಟೀಲ, ‘ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜಮೀನುಗಳು ಜಲಾವೃತ್ತಗೊಂಡ ಪರಿಣಾಮ ಎಲ್ಲ ಬೆಳೆಗಳು ಹಾಳಾಗಿವೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಬೆಳೆ ಸಮೀಕ್ಷೆ ಮಾಡಿಸಿ, ಎಲ್ಲ ರೈತರಿಗೆ ಬೆಳೆ ಹಾನಿ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೆಜ್ಲಿ ಮಾತನಾಡಿ, ‘ದುಂಡಶಿ ಹೋಬಳಿಯಲ್ಲಿ ಬೆಳೆ  ಹಾನಿಯಾದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರಿಹಾರ ನೀಡುವ ಕುರಿತು ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರೈತರಾದ ಫಕ್ಕಿರೆಡ್ಡಿ ನಡುವಿನಮನಿ, ಈರಣ್ಣ ಸಮಗೊಂಡ, ಮುತ್ತು ಗುಡಿಗೇರಿ, ವೀರಭದ್ರಪ್ಪ ವಾಲಿಶಟ್ಟರ, ಶಿವಪುತ್ರಯ್ಯ ಹಿರೇಮಠ, ಪ್ರಶಾಂತ ಮಹಾಜನ್ ಶೆಟ್ಟರೆ, ಯಲ್ಲಪ್ಪ ನಡುವಿನಮನಿ, ನಿಂಗನಗೌಡ ಪಾಟೀಲ ಇದ್ದರು.

ದುಂಡಶಿ ಹೋಬಳಿಯ ರೈತರ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಬೆಳೆ ಹಾನಿ ನೀಡುವಂತೆ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ್ ಗೆಜ್ಲಿ ಮನವಿ ಸಲ್ಲಿಸಿದರು.

‘ಕ್ರಮ ವಹಿಸಲು 10 ದಿನ ಗಡುವು’

‘ಬೆಳೆ ಹಾನಿ ಪರಿಹಾರ ಹಾಗೂ ಮಧ್ಯಂತರ ವಿಮೆ ಹಣವನ್ನು 10 ದಿನದೊಳಗೆ ರೈತರಿಗೆ ನೀಡದಿದ್ದರೆ ಸೆಪ್ಟೆಂಬರ್ 1ರಂದು ದುಂಡಶಿ ಹೋಬಳಿಯ ನಾಡಕಚೇರಿ ರೈತ ಸಂಪರ್ಕ ಕೇಂದ್ರ ಕೆವಿಜಿ ಬ್ಯಾಂಕ್ ಎದುರು ಹಾಗೂ ತಡಸ–ಹಾನಗಲ್ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತರ ಮುಖಂಡ ವಿರೂಪಾಕ್ಷಗೌಡ ಪಾಟೀಲ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.