ಹಾವೇರಿ: ರೈತರ ಜಮೀನುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡದೆ ಕಚೇರಿಯಲ್ಲೇ ವರದಿ ತಯಾರಿಸಿದ್ದಾರೆ. ಹೀಗಾಗಿ ನಿಖರವಾದ ಬೆಳೆ ಹಾನಿ ವರದಿಯಾಗಿಲ್ಲ ಹಾಗೂ ರೈತರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ನಿಖರ ಸಮೀಕ್ಷೆ ಮಾಡಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕ ಒತ್ತಾಯಿಸಿದೆ.
ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ ಸುಮಾರು 54 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ 90ರಷ್ಟು ಬೆಳೆಗಳು ನಾಶವಾಗಿದ್ದು, ನಾಶವಾದ ಬೆಳೆ ತೆಗೆದು ಹಿಂಗಾರು ಬೆಳೆ ಬಿತ್ತನೆ ಮಾಡಲು ಸಹ ಮಳೆ ಬಿಡುವು ನೀಡುತ್ತಿಲ್ಲ. ಇದರಿಂದ ರೈತರ ಬದುಕು ಬೀದಿಗೆ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬೆಳೆ ಹಾನಿ ವರದಿ ತಯಾರಿಸಿ 7875 ಹೆಕ್ಟೇರ್ ಹಾನಿಯಾಗಿದೆ ಎಂದು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದರು. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಮಳೆ ಮತ್ತೆ ಸುರಿದ ಪರಿಣಾಮ ಕೃಷಿ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿದ್ದಾಗ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿದ ನಂತರ ಶೇಕಡ 33ರಷ್ಟು ಹಾನಿಯಾದ ಪ್ರದೇಶದ ಬದಲು ಶೇಕಡ 60ರಷ್ಟು ಅಂದರೆ 12,500 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ವರದಿ ತಯಾರಿಸಿ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿದ್ದಾರೆ.
ಇದರಲ್ಲಿ ಅರ್ಜಿ ಸಲ್ಲಿಸಿದ ಒಟ್ಟು ರೈತರು 18,238 ಇದ್ದು, ಈ ವರದಿಯಲ್ಲಿಯೂ ಸಹ ಹಲವಾರು ಲೋಪದೋಷಗಳಿವೆ. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ರೈತರು ಸಲ್ಲಿಸಿದ ಅರ್ಜಿ ಆಧಾರದ ಮೇಲೆ 4 ಎಕರೆ ಜಮೀನಿನಲ್ಲಿ ಬೆಳೆ ಹಾನಿಯಾದರೆ 20 ಗುಂಟೆಗೆ ಮಾತ್ರ ಹಾನಿಯಾಗಿದೆ ಎಂದು ವರದಿಯನ್ನು ತಯಾರಿಸಿದ್ದಾರೆ ಎಂದು ದೂರಿದ್ದಾರೆ.
ಹಾವೇರಿ ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದ್ದು, ಇನ್ನುಳಿದ ಶೇಕಡ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 70ರಷ್ಟು ಬೆಳೆ ಹಾನಿಯಾಗಿದ್ದು ಕೂಡಲೇ ಅಧಿಕಾರಿಗಳು ಬೆಳೆ ಹಾನಿಯಾದ ಪ್ರದೇಶಕ್ಕೆ ತೆರಳಿ ಸರ್ವೆ ಕಾರ್ಯ ಮಾಡಿ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ ಮಾಡಬೇಕು. ಶೀಘ್ರವಾಗಿ ಬೆಳೆ ವಿಮೆ ತುಂಬಿದ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಶೇ 25ರಷ್ಟು ಹಣ ನೀಡಬೇಕು ಹಾಗೂ ವಿದ್ಯುತ್ ಖಾಸಗಿಕರಣ ಸೇರಿ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಒಂದು ತಿಂಗಳ ಒಳಗೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬೇಡಿಕೆಗೆ ಸ್ಪಂದಿಸದಿದ್ದರೆ,ಮೊಟೇಬೆನ್ನೂರು ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಉಪತಹಶೀಲ್ದಾರ್ ನಾಗರತ್ನ ಕಾಳೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ದಿಳ್ಳೆಪ್ಪ ಮಣ್ಣೂರ್, ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ,ಸುರೇಶ್ ಚಲವಾದಿ, ಕೊಟ್ರೇಶಪ್ಪ ಕರ್ಜಗಿ, ಕರಿಬಸಪ್ಪ ನಾಗಮ್ಮನವರ, ಪಂಚಯ್ಯ ಹಿರೇಮಠ, ಶಾರದಾ ಹಿರೇಮಠ, ಶಂಕ್ರಪ್ಪ ಪೂಜಾರ, ಹೇಮಣ್ಣ ಕೋಡಿಹಳ್ಳಿ, ಹೊಳಬಸಪ್ಪ ಬಣಕಾರ, ದೊಡ್ಡಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.