ADVERTISEMENT

ಬೆಳೆ ನಷ್ಟ: ಪರಿಹಾರ ಬಿಡುಗಡೆಗೆ ಆಗ್ರಹ

ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ರೈತ ಮುಖಂಡ ಕೆ.ಟಿ.ಗಂಗಾಧರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 13:37 IST
Last Updated 7 ಡಿಸೆಂಬರ್ 2021, 13:37 IST
ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿ ಸಭೆ ನಡೆಯಿತು –ಪ್ರಜಾವಾಣಿ ಚಿತ್ರ    

ಹಾವೇರಿ: ‘ಮಳೆ ಮತ್ತು ಪ್ರವಾಹದಿಂದ ರೈತರ ಬೆಳೆಗಳು ನೀರುಪಾಲಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ‘ಬೆಳೆ ಪರಿಹಾರ’ ಘೋಷಿಸಬೇಕು. ಪ್ರಾಕೃತಿಕ ವಿಕೋಪದಲ್ಲಿ ರೈತರಿಗಾದ ನಷ್ಟ ಪರಿಹಾರ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ’ ಎಂದು ರೈತ ನಾಯಕ ಕೆ.ಟಿ.ಗಂಗಾಧರ್‌ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ‘ರಾಜ್ಯ ಸಮಿತಿ ಸಭೆ’ಯ ನಂತರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಂಟಿ ಸಮೀಕ್ಷೆ ಮಾಡಿಸಿ, ವರದಿ ಬಂದ ನಂತರ ಪರಿಹಾರ ನೀಡುತ್ತೇವೆ ಎಂದು ವರದಿಗಾಗಿ ಕಾಯುತ್ತಿರುವುದು ಸರ್ಕಾರದ ಅಸಹಾಯಕತೆಯನ್ನು ತೋರಿಸುತ್ತದೆ. ಎಸ್‌ಡಿಆರ್‌ಎಫ್‌ ಮತ್ತು ಎನ್‌ಡಿಆರ್‌ಎಫ್‌ನಿಂದ ಬೆಳೆ ನಷ್ಟ ತುಂಬಿಕೊಡಬೇಕು. ಭತ್ತ, ಮೆಕ್ಕೆಜೋಳಕ್ಕೆ ಫಂಗಸ್‌ ತಗುಲಿದ ಪರಿಣಾಮ ತಿನ್ನಲು ಯೋಗ್ಯವಾಗಿಲ್ಲ. ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಷ್ಟ್ರೀಯ ವಿಕೋಪ ಪರಿಸ್ಥಿತಿ ಘೋಷಣೆ ಮಾಡಬೇಕು ಎಂದರು.

ADVERTISEMENT

ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್‌ಪಿ) ಸಣ್ಣ ರೈತರ ಭತ್ತವನ್ನು ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ಮಧ್ಯೆ ಭೇದಭಾವ ಮಾಡದೆ, ಎಲ್ಲ ರೈತರ ಭತ್ತವನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣ ಹಿಂಪಡೆಯಲು ಆಗ್ರಹ:

ಗೋವಾ ಮತ್ತು ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಮಹದಾಯಿ ಸಮಸ್ಯೆಯನ್ನು ಇತ್ಯರ್ಥಪಡಿಸದೇ ಇರುವುದನ್ನು ನೋಡಿದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತದೆ.ಮಹದಾಯಿ ಹೋರಾಟದ ಪ್ರಕರಣಗಳನ್ನು ‘ರೀಓಪನ್‌’ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಮುಖ್ಯಮಂತ್ರಿ ಅವರು ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಬೇಕು. ರೈತರ ಮೇಲೆ ಸೇಡಿನ ಕ್ರಮ ಸರಿಯಲ್ಲ. ರೈತರ ವಿರುದ್ಧ ನಿಂತ ಯಾವ ಸರ್ಕಾರವೂ ಉಳಿದಿಲ್ಲ ಎಂದು ಕಿಡಿಕಾರಿದರು.

ರೈತರ ಸಭೆ ಕರೆಯಲಿ:

ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷದಲ್ಲಿದ್ದಾಗ ರೈತರೊಂದಿಗೆ ಬಂದು ಮಾತನಾಡುತ್ತಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು, ಬೆಳಗಾವಿ ಅಧಿವೇಶನಕ್ಕೂ ಮುನ್ನ ರೈತರ ಸಭೆ ಕರೆಯಬೇಕು. ರೈತರ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿ ಕಾಯ್ದೆ ರಾಜ್ಯದಲ್ಲೂ ರದ್ದಾಗಲಿ

ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಪಡಿಸಿದ್ದಾರೆ. ಇದೇ ರೀತಿ,ಮುಖ್ಯಮಂತ್ರಿ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ರಾಜ್ಯದಲ್ಲೂ ರದ್ದುಪಡಿಸಲು ತೀರ್ಮಾನ ತೆಗೆದುಕೊಳ್ಳಬೇಕು. ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಯಾರೂ ಖರೀದಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.

36 ವರ್ಷ ನೆಲಕಚ್ಚಿದ್ದ ಕಾಂಗ್ರೆಸ್‌

1980ರಿಂದ 83ರಲ್ಲಿ ರೈತ ಚಳವಳಿಯನ್ನು ಹತ್ತಿಕ್ಕಿ, ನರಗುಂದ, ನವಲಗುಂದ, ಗಜೇಂದ್ರಗಡ, ನಿಪ್ಪಾಣಿ, ಪಾಂಡವಪುರ ಸೇರಿದಂತೆ ರಾಜ್ಯದಾದ್ಯಂತ 156 ರೈತರನ್ನು ಗುಂಡಿಕ್ಕಿ ಕೊಲ್ಲಲಾಯಿತು. ರೈತರ ಮೇಲೆ ಗೋಲಿಬಾರ್‌ ಮಾಡಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಮತ ಇಲ್ಲ ಎಂದು ರೈತ ಸಂಘ ನಿರ್ಣಯ ತೆಗೆದುಕೊಂಡಿತು. ನಿರಂಕುಶ ಪ್ರಭುತ್ವ ಮಾಡಿದ್ದ ಕಾಂಗ್ರೆಸ್‌ 36 ವರ್ಷ ನೆಲಕಚ್ಚಿತು. 2023ರ ಸಾರ್ವತ್ರಿಕ ಚುನಾವಣೆಯಲ್ಲೂ ಒಳ್ಳೆಯ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ಮಂಜುಳಾ ಅಕ್ಕಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.