ADVERTISEMENT

ಅತಿಯಾದ ಮಳೆ | ಕೊಳೆತ ಬೆಳೆ: ಹಾವೇರಿ ಜಿಲ್ಲೆಯಾದ್ಯಂತ ಬಹುಪಾಲು ರೈತರ ಕಣ್ಣೀರು

ಸಂತೋಷ ಜಿಗಳಿಕೊಪ್ಪ
Published 1 ಸೆಪ್ಟೆಂಬರ್ 2025, 3:47 IST
Last Updated 1 ಸೆಪ್ಟೆಂಬರ್ 2025, 3:47 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜಮೀನಿನಲ್ಲಿ ಹಾಳಾಗಿ ಕೊಳೆತಿರುವ ಬೆಳ್ಳುಳ್ಳಿ ಬೆಳೆ
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಜಮೀನಿನಲ್ಲಿ ಹಾಳಾಗಿ ಕೊಳೆತಿರುವ ಬೆಳ್ಳುಳ್ಳಿ ಬೆಳೆ   

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಖುಷಿಯಿಂದಲೇ ಬಿತ್ತನೆ ಮಾಡಿ ಮುಗಿಸಿದ್ದ ರೈತರು, ಇದೀಗ ಬೆಳೆ ನಷ್ಟದಿಂದಾಗಿ ಕಣ್ಣೀರು ಸುರಿಸುತ್ತಿದ್ದಾರೆ.

ನಿರಂತರ ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ಜಮೀನು ಜವಳಾಗಿ, ಬೆಳೆಗಳು ನೆಲಕಚ್ಚಿ ಅನ್ನದಾತನನ್ನು ಕಂಗಾಲಾಗಿಸಿದೆ. ಕೆಲವು ಕಡೆಗಳಲ್ಲಿ ಕೆರೆಗಳು ಕೋಡಿ ಬಿದ್ದು, ಜಮೀನಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ.

ರೈತಾಪಿ ನಾಡಾದ ಹಾವೇರಿ ಜಿಲ್ಲೆ, ಅರೆ ಮಲೆನಾಡು ಪರಿಸರ ಹೊಂದಿದೆ. ಇಲ್ಲಿಯ ಬಹುಪಾಲು ಜಮೀನುಗಳಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬಯಲು ಸೀಮೆಯಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಶೇ 90ರಷ್ಟು ಮೆಕ್ಕೆಜೋಳ ಬೆಳೆಯಿದೆ. ಈ ವರ್ಷ  ಜೋರು ಮಳೆಯಾಗಿದ್ದು, ಜಮೀನಿನಲ್ಲಿ ನೀರು ನಿಂತುಕೊಂಡು ಬೆಳೆ ಹಾನಿಯಾಗಿದೆ.

ADVERTISEMENT

ಜಿಲ್ಲೆಯ ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಹಾನಗಲ್, ಶಿಗ್ಗಾವಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನೆಲಕಚ್ಚಿದೆ. ಸವಣೂರು, ಹಾವೇರಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನಲ್ಲೂ ಬೆಳೆ ಹಾನಿಯಾಗಿದೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ ಜಮೀನು ಹದಗೊಳಿಸಿದ್ದ ರೈತರು, ಮುಂಗಾರು ಮಳೆ ಆರಂಭದಲ್ಲಿಯೇ ಬಿತ್ತನೆ ಮಾಡಿದ್ದಾರೆ. ಈ ಬಾರಿ ಮಳೆ ಹೆಚ್ಚಿನ ಸಂದರ್ಭಗಳಲ್ಲಿ ಜಿಟಿಜಿಟಿಯಾಗಿ ಸುರಿದಿದ್ದು, ಮೋಡ ಕವಿದ ವಾತಾವರಣವೇ ಹೆಚ್ಚಿತ್ತು. ಹೀಗಾಗಿ, ಬೆಳೆಗಳ ಬೆಳವಣಿಗೆ ತೀರಾ ಕುಂಠಿತವಾಗಿದೆ.

ಇದೀಗ ಮುಂಗಾರು ಮುಕ್ತಾಯದ ಹಂತದಲ್ಲಿದ್ದು, ಬೆಳೆಗಳು ಭಾಗಶಃ ಹಾಳಾಗಿವೆ. ಜಿಲ್ಲೆಯ ತಾಲ್ಲೂಕುಗಳ ಗ್ರಾಮಗಳಲ್ಲಿ ಸುತ್ತಾಡಿದರೆ, ಹಾಳಾದ ಬೆಳೆಯು ಕಣ್ಣಿಗೆ ಕಾಣಿಸುತ್ತದೆ. ನೀರು ನಿಂತು ಜವಳಾದ ಭೂಮಿಯಲ್ಲಿರುವ ಬೆಳೆ, ನಾನಾ ರೋಗಕ್ಕೆ ತುತ್ತಾಗಿದೆ. 

ಮೆಕ್ಕೆಜೋಳ, ಸೋಯಾಬೀನ್, ಹತ್ತಿ, ಹೆಸರು, ಬೆಳ್ಳುಳ್ಳಿ, ಮೆಣಸಿನಕಾಯಿ, ಟೊಮೆಟೊ, ಸೇರಿದಂತೆ ಹಲವು ಬೆಳೆಗಳು ನೆಲಕ್ಕಚ್ಚಿವೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸ್ಥಿತಿ ಚಿಂತಾಜನಕವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭಯದಲ್ಲಿದ್ದಾರೆ.

3.14 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿರುವ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಗೋವಿನ ಜೋಳ (ಮೆಕ್ಕೆಜೋಳ) ಬೆಳೆಯಲಾಗಿದೆ. ಹೆಚ್ಚು ಕಡೆಗಳಲ್ಲಿ ಮೆಕ್ಕೆಜೋಳವೇ ಹಾಳಾಗಿದೆ. ತೆನೆ ಕಟ್ಟುವ ಸಂದರ್ಭದಲ್ಲಿಯೇ ಜಿಟಿ ಜಿಟಿ ಮಳೆಯಾಗಿ ಭೂಮಿ ಜವಳಾಗಿದೆ. ಇದರಿಂದ, ಗಿಡಗಳ ಬೆಳವಣಿಗೆ ಕಡಿಮೆಯಾಗಿ ಹಾಳಾಗಿದೆ.

ಎಕರೆಗೆ ₹ 20 ಸಾವಿರದಿಂದ ₹ 40 ಸಾವಿರ ಖರ್ಚು ಮಾಡಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಭೂಮಿ ಹದ, ಬಿತ್ತನೆ, ಕಾರ್ಮಿಕರು ಸೇರಿದಂತೆ ಎಲ್ಲದ್ದಕ್ಕೂ ಖರ್ಚು ಮಾಡಿದ್ದಾರೆ. ಆದರೆ, ಈಗ ಬಹುತೇಕ ಬೆಳೆ ಹಾಳಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

‘3 ಎಕರೆ ಮೆಕ್ಕೆಜೋಳ ಬೆಳೆದಿದ್ದೆ. ಅದರಲ್ಲಿ ಬಹುಪಾಲು ಮೆಕ್ಕೆಜೋಳ, ಜವಳಿನಿಂದಾಗಿ ಹಾಳಾಗಿದೆ. ನಿಗದಿಯಷ್ಟು ಬೆಳೆಯಾಗಿದ್ದರೆ ಉತ್ತಮ ಫಸಲು ಬರುತ್ತಿತ್ತು. ಲಾಭವೂ ಆಗುತ್ತಿತ್ತು. ಆದರೆ, ಈಗ ನಷ್ಟದ ಭಯ ಕಾಡುತ್ತಿದೆ’ ಎಂದು ಬ್ಯಾಡಗಿ ರೈತ ಚನ್ನಬಸಪ್ಪ ಅಳಲು ತೋಡಿಕೊಂಡರು. 

ಪರಿಹಾರಕ್ಕಾಗಿ 43 ಸಾವಿರ ಅರ್ಜಿ ಸಲ್ಲಿಕೆ: ಮುಂಗಾರು ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ ಕೋರಿ ಜಿಲ್ಲೆಯ 43 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ತಾಲ್ಲೂಕುವಾರು ಅರ್ಜಿ ಸ್ವೀಕರಿಸಿರುವ ಜಿಲ್ಲಾಡಳಿತ, ಜಂಟಿ ಸಮಿತಿ ಮೂಲಕ ಸಮೀಕ್ಷೆ ನಡೆಸುತ್ತಿದೆ.

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಹಾವೇರಿ, ಶಿಗ್ಗಾವಿ, ಸವಣೂರು ಹಾಗೂ ರಾಣೆಬೆನ್ನೂರಿನ ರೈತರು ಅರ್ಜಿ ಸಲ್ಲಿಸಿದ್ದಾರೆ. ಅಂದಾಜು 22,600 ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ಹಾಗೂ 395.82 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು, ಪ್ರತಿಯೊಬ್ಬ ರೈತರ ಜಮೀನಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

‘ಮುಂಗಾರು ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಬಗ್ಗೆ ತೋಟಗಾರಿಕೆ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದ ಜಂಟಿ ಸಮಿತಿಯಿಂದ ಸಮೀಕ್ಷೆ ನಡೆಯುತ್ತಿದೆ. ರೈತರ ಅರ್ಜಿಗಳು ಹಾಗೂ ಲಭ್ಯವಿರುವ ಮಾಹಿತಿ ಆಧರಿಸಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರ ಅಂತಿಮ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಅವರು ‍‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಿಂದ ಹೆಚ್ಚು ಅರ್ಜಿಗಳು ಬಂದಿವೆ. ಅಲ್ಲೆಲ್ಲ ಬಹುಪಾಲು ಮೆಕ್ಕೆಜೋಳ ಹಾಳಾಗಿದೆ’ ಎಂದರು.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿರುವ ಮೆಕ್ಕೆಜೋಳದ ಪರಿಸ್ಥಿತಿ

ವಾಡಿಕೆಗಿಂತ ಕಡಿಮೆ ಮಳೆಯಾದರೂ ಹಾನಿ: ಜಿಲ್ಲೆಯಲ್ಲಿ ಮುಂಗಾರು ಆರಂಭವಾದ ಜೂನ್ 1ರಿಂದ ಆಗಸ್ಟ್ 28ರವರೆಗೆ 40.14 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 35.35 ಸೆಂ.ಮೀ. ಮಳೆಯಾಗಿದೆ. ವಾಡಿಕೆಗೆ ಹೋಲಿಸಿದರೆ, ಶೇ 11.90ರಷ್ಟು ಕಡಿಮೆ ಮಳೆಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾದರೆ ಮಾತ್ರ ಬೆಳೆ ಹಾನಿ ಆಗಿರಬಹುದೆಂದು ಅಂದುಕೊಳ್ಳಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದರೂ ಜಿಟಿ ಜಿಟಿ ಮಳೆಯಾಗಿದೆ. ಬಿಸಿಲು ಸಹ ಕಾಣಿಸಿಕೊಂಡಿಲ್ಲ. ಜಿಟಿ ಜಿಟಿ ಮಳೆಯಿಂದಾಗಿ ಬೆಳೆ ನೆಲಕ್ಕಚ್ಚಿದೆ.

ಜಿಲ್ಲೆಯಲ್ಲಿ ಹಲವು ಏತ ನೀರಾವರಿ ಯೋಜನೆಗಳಿವೆ. ಇದರ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಕೆರೆಗಳು ಪೂರ್ಣ ತುಂಬಿದ ಸಂದರ್ಭದಲ್ಲಿ ಮಳೆಯೂ ಜೋರಾಗಿ ಸುರಿದಿದೆ. ಇದರಿಂದಾಗಿ ಕೆರೆಯಲ್ಲಿ ನೀರು ಹೆಚ್ಚಾಗಿ, ಅಕ್ಕ–ಪಕ್ಕದ ಜಮೀನಿಗೆ ನುಗ್ಗಿದೆ. ಇದರಿಂದಲೂ ಬೆಳೆ ಹಾನಿ ಉಂಟಾಗಿದೆ.

ಬ್ಯಾಡಗಿ ತಾಲ್ಲೂಕಿನ ಜಮೀನಿನಲ್ಲಿ ಹಾಳಾಗಿರುವ ಮೆಕ್ಕೆಜೋಳ ಬೆಳೆ
ಜಿಲ್ಲೆಯಲ್ಲಿ ಬಹುತೇಕ ಬೆಳೆ ಹಾನಿಯಾಗಿದ್ದು ಅಧಿಕಾರಿಗಳು ಸಮೀಕ್ಷೆ ನಡೆಸಿ ಸರ್ಕಾರದಿಂದ ಪ್ರತಿ ಎಕರೆಗೆ ₹ 30 ಸಾವಿರ ಪರಿಹಾರ ಕೊಡಿಸಬೇಕು
ಮಲ್ಲಿಕಾರ್ಜುನ ಬಳ್ಳಾರಿ ರೈತಪರ ಹೋರಾಟಗಾರ
ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಪರವಿರುವುದಾಗಿ ಹೇಳುವ ಸರ್ಕಾರ ಕೂಡಲೇ ಬೆಳೆ ಪರಿಹಾರ ಘೋಷಣೆ ಮಾಡಬೇಕು. ಇಲ್ಲದಿದ್ದರಿಂದ ಹೋರಾಟ ನಿಶ್ಚಿತ
ರವೀಂದ್ರಗೌಡ ಪಾಟೀಲ ರೈತಪರ ಹೋರಾಟಗಾರ

‘ನಿಯಮಾವಳಿ ತಿದ್ದುಪಡಿ ಅಗತ್ಯ’

‘ವಾಡಿಕೆಗಿಂತ ಹೆಚ್ಚು ಮಳೆಯಾದರೆ ಮಾತ್ರ ಹಾನಿ ಎಂದು ಪರಿಗಣಿಸಿ ಪರಿಹಾರ ನೀಡುವುದು ಅವೈಜ್ಞಾನಿಕ. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ನಿಯಮಾವಳಿಗಳನ್ನೇ ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ರೈತ ಸಂಘದ ಒತ್ತಾಯರ ಮೇರೆಗೆ ಜಿಲ್ಲಾಡಳಿತದ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಅರ್ಜಿ ಸ್ವೀಕರಿಸುತ್ತಿದ್ದಾರೆ’ ಎಂದು ಆಗ್ರಹಿಸಿದರು. ‘ಸದ್ಯದ ನಿಯಮಾವಳಿ ಪ್ರಕಾರ ಎನ್‌ಡಿಆರ್‌ಎಫ್‌ ಅನುದಾನದಲ್ಲಿ ಹೆಕ್ಟೇರ್‌ಗೆ ₹ 8500 ಪರಿಹಾರ ನೀಡಲು ಅವಕಾಶವಿದೆ. ಆದರೆ ಈ ನಿಯಮವೂ ಅವೈಜ್ಞಾನಿಕ. ಸ್ಥಳಿಯವಾಗಿ ರೈತರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಲೆಕ್ಕ ಹಾಕಿ ಅದಕ್ಕೆ ತಕ್ಕಂತೆ ಪರಿಹಾರ ನೀಡುವ ನಿಯಮ ಬರಬೇಕು’ ಎಂದರು. ‘ಎನ್‌ಡಿಆರ್‌ಎಫ್‌–ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಲೋಪಗಳಿವೆ. ಅವುಗಳನ್ನು ಬದಲಾವಣೆ ಮಾಡಬೇಕು. ಮಳೆ ಮಾಪನ ಆಧಾರದಲ್ಲಿ ಬೆಳೆ ಹಾನಿ ನಿರ್ಧರಿಸಲು ಆಗುವುದಿಲ್ಲ. ಎಲ್ಲ ಆಯಾಮದಲ್ಲೂ ಪರಿಶೀಲನೆ ನಡೆಸಿ ಹಾನಿ ಬಗ್ಗೆ ತೀರ್ಮಾನಿಸಬೇಕು’ ಎಂದು ಆಗ್ರಹಿಸಿದರು.

ಸಾಲಗಾರರ ಕಾಟ
ಸರ್ಕಾರದಿಂದ ಎಷ್ಟೇ ಯೋಜನೆಗಳು ಜಾರಿಯಲ್ಲಿದ್ದರೂ ಬಹುತೇಕ ರೈತರು ಸಾಲ ಮಾಡಿಯೇ ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಬೀಜ ಗೊಬ್ಬರ ಖರೀದಿಯಿಂದ ಹಿಡಿದು ಪ್ರತಿಯೊಂದಕ್ಕೆ ಮತ್ತೊಬ್ಬರ ಬಳಿ ಸಾಲ ತರುತ್ತಿದ್ದಾರೆ. ಈಗ ಬೆಳೆ ಹಾನಿ ಸಂಭವಿಸಿದ್ದರಿಂದ ರೈತರಿಗೆ ಸಾಲಗಾರರ ಕಾಟವೂ ಶುರುವಾಗಿದೆ. ಜಿಲ್ಲೆಯಾದ್ಯಂತ 1ರಿಂದ 3 ಎಕರೆ ಜಮೀನು ಹೊಂದಿರುವ ರೈತರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಕೃಷಿಗಾಗಿ ಪರಿಚಯಸ್ಥ ವ್ಯಾಪಾರಿಗಳು ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಬೆಳೆಯ ಫಸಲು ಕೈಸೇರಿದ ಬಳಿಕ ಸಾಲ ಮರು ಪಾವತಿ ಮಾಡುವ ಭರವಸೆ ಸಹ ನೀಡಿದ್ದಾರೆ. ಈಗ ಬೆಳೆ ಸಂಪೂರ್ಣ ನಾಶವಾದರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ‘₹ 30 ಸಾವಿರ ಕೈ ಸಾಲ ಮಾಡಿ 2 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಬೆಳೆಯ ಬೆಳವಣಿಗೆ ಕುಂಠಿತವಾಗಿದ್ದು ತೆನೆ ಸಹ ಕಟ್ಟಿಲ್ಲ. ಕಟಾವು ಸಂದರ್ಭದಲ್ಲಿ ಕಡಿಮೆ ಇಳುವರಿ ಬರುವ ಲಕ್ಷಣಗಳು ಗೋಚರಿಸುತ್ತಿವೆ. ನಿಗದಿಗಿಂತ ಕಡಿಮೆ ಫಸಲು ಬಂದರೆ ಸಾಲ ತೀರಿಸುವುದು ಹೇಗೆ ? ನನ್ನ ಕುಟುಂಬ ನಡೆಸುವುದು ಹೇಗೆ’ ಎಂದು ಶಿಗ್ಗಾವಿ ರೈತ ಸೋಮಪ್ಪ ಕರ್ಕಿಹಳ್ಳಿ ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.