ಶಿಗ್ಗಾವಿ: ಮನುಕುಲದ ಸರ್ವಾಂಗೀಣ ಏಳ್ಗೆಗಾಗಿ ದೇವಿ ಆರಾಧನೆ ಮುಖ್ಯವಾಗಿದೆ. ಹೀಗಾಗಿ ಪೂರ್ವಜರು ಪರಂಪರಾಗತವಾಗಿ ದೇವಿ ಆರಾಧನೆ, ದೇವಿ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂಸ್ಕೃತಿ ಮುಂದಿನ ಪೀಳಿಗೆಗೂ ಸಾಗಬೇಕು ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಸೋಮವಾರ ರಾತ್ರಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ನಡೆದ ಶರನ್ನವರಾತ್ರಿ ಹಾಗೂ ಗ್ರಾಮದೇವಿ ಮಹಾ ಪುರಾಣ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದುಷ್ಟರಿಗೆ ಶಿಕ್ಷೆ ಶಿಷ್ಟರ ಪರಿಪಾಲನೆಗೈಯುವ ಶಕ್ತಿ ಸ್ವರೂಪಳಾದ ಮಾತಾ ದುರ್ಗಾದೇವಿಯ ಆರಾಧನೆಯ ಹಬ್ಬವೇ ನವರಾತ್ರಿ. ಈ ಹಬ್ಬದಲ್ಲಿ ದೇವಿಯನ್ನು ಶಕ್ತಿಯ ನಾನಾ ರೂಪದಲ್ಲಿ ಆರಾಧಿಸಲಾಗುತ್ತದೆ. ದೇವಿ ಮಹಿಷಾಸುರನನ್ನು ವಧೆಗೈದಿದ್ದು, ದುಷ್ಟಗುಣಗಳನ್ನು ದೂರ ಮಾಡಿ ಸಾತ್ವಿಕತೆ ರೂಢಿಸಿಕೊಳ್ಳಬೇಕು ಎಂಬ ಸಂಕೇತ ನೀಡುತ್ತದೆ ಎಂದರು.
ಗಂಜಿಗಟ್ಟಿ ಚರಮೂರ್ತಿಶ್ವರ ಮಠದ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಕುನ್ನೂರ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಕಾಡಶೆಟ್ಟಿಹಳ್ಳಿ ವೀರೇಶ್ವರ ಪುಣ್ಯಾಶ್ರಮದ ಶಿವಬಸ ಶಾಸ್ತ್ರಿ, ಶಿವಾನಂದ, ದೇವಾಲ, ಬಸವರಾಜ ಚಳಗೇರಿ ಸಂಗೀತ ಸೇವೆ ನೀಡಿದರು.
ಮುಖಂಡರಾದ ಜಯಣ್ಣ ಹೆಸರೂರ, ಅಶೋಕ ಬಂಕಾಪುರ, ಬಸಣ್ಣ ಹೆಸರೂರ, ಫಕ್ಕೀರಜ್ಜ ಯಲಿಗಾರ, ವೀರಣ್ಣ ಬಡ್ಡಿ, ದತ್ತಣ್ಣ ವರ್ಣೇಕರ್, ಸಿದ್ಧಣ್ಣ ಮೊರಬದ, ಫಕ್ಕೀರಪ್ಪ ಕುಂದೂರ, ಮಂಜುನಾಥ ಯಲಿಗಾರ, ಅಶೋಕ ಕಾಳೆ, ಶಂಕರಗೌಡ್ರ ಪಾಟೀಲ, ಪುರಸಭೆ ಸದಸ್ಯರಾದ ರಮೇಶ ವನಹಳ್ಳಿ, ಶ್ರೀಕಾಂತ ಬುಳ್ಳಕ್ಕನವರ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಎಲ್ಲ ಸದಸ್ಯರು, ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.