ADVERTISEMENT

ಹದಗೆಟ್ಟ ರಸ್ತೆ, ತುಂಬಿ ತುಳುಕುವ ಚರಂಡಿ

ಮೂಲಸೌಕರ್ಯ ಕಲ್ಪಿಸಲು ನಿವಾಸಿಗಳ ಆಗ್ರಹ: ಕುಡಿಯುವ ನೀರಿಗೆ ನಿವಾಸಿಗಳ ಪರದಾಟ

ಗಣೇಶಗೌಡ ಎಂ.ಪಾಟೀಲ
Published 12 ಅಕ್ಟೋಬರ್ 2021, 14:17 IST
Last Updated 12 ಅಕ್ಟೋಬರ್ 2021, 14:17 IST
ಸವಣೂರ ಪಟ್ಟಣದ ಕಮಾಲಬಂಗಡಿ ಬಡಾವಣೆಯಲ್ಲಿರುವ ರಸ್ತೆಯ ದುಃಸ್ಥಿತಿ 
ಸವಣೂರ ಪಟ್ಟಣದ ಕಮಾಲಬಂಗಡಿ ಬಡಾವಣೆಯಲ್ಲಿರುವ ರಸ್ತೆಯ ದುಃಸ್ಥಿತಿ    

ಸವಣೂರ: ಹದಗೆಟ್ಟ ರಸ್ತೆ, ಬೆಳಗದ ಬೀದಿ ದೀಪ, ಸ್ವಚ್ಛತೆ ಕಾಣದ ಚರಂಡಿ...ಹಲವಾರು ಸಮಸ್ಯೆಗಳಿಂದ ನಿವಾಸಿಗಳು ಬೇಸತ್ತಿದ್ದಾರೆ.ಮೂಲಸೌಕರ್ಯಗಳನ್ನೂ ಕಲ್ಪಿಸದ ಪುರಸಭೆಯ ವಿರುದ್ಧ ಕೋರಿಪೇಟಿ, ಕಮಾಲಬಂಗಡಿ, ಲಾಲಷಾಕಟ್ಟೆ ನಿವಾಸಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣದ ಕಮಾಲಬಂಗಡಿ ಬಡಾವಣೆಯಲ್ಲಿ ಉತ್ತಮ ರಸ್ತೆಗಳನ್ನು ಕಾಣದೆ ಜನರು ಓಡಾಡಲು ಹರಸಾಹಸ ಪಡುವಂತ ಸ್ಥಿತಿ ಒಂದೆಡೆಯಾದರೆ, ಬೀದಿದೀಪದ ಸಮಸ್ಯೆಯಿಂದ ರಾತ್ರಿ ವೇಳೆ ಮಹಿಳೆಯರು ಮತ್ತು ಮಕ್ಕಳು ಓಡಾಡುವುದೇ ಕಷ್ಟವಾಗಿದೆ.

ಈ ಬಡಾವಣೆಯಲ್ಲಿರುವ ಚರಂಡಿ ವ್ಯವಸ್ಥೆಯಂತೂ ಹೇಳತೀರದಾಗಿದೆ. ಮಳೆ ಬಂದರೆ ಸಾಕು ಚರಂಡಿಯಲ್ಲಿನ ತ್ಯಾಜ್ಯದ ನೀರು ಪಕ್ಕದ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತದೆ. ಈ ಕುರಿತು ಸ್ಥಳೀಯ ವಾರ್ಡ್‌ ಸದಸ್ಯರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಮಹಮ್ಮದ್‌ಗೌಡ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

ಚರಂಡಿಗಳಲ್ಲಿ ಪ್ಲಾಸ್ಟಿಕ್‌, ಕಸ, ಹೂಳು ತುಂಬಿಕೊಂಡು, ನೀರು ಮುಂದಕ್ಕೆ ಹರಿಯದೆ ಕೊಳೆತು ನಾರುತ್ತಿದೆ. ಸ್ಥಳೀಯ ನಿವಾಸಿಗಳು ದುರ್ವಾಸನೆಯನ್ನು ಸಹಿಸಿಕೊಂಡೇ ಜೀವನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹಲವಾರು ಮಂದಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕುಡಿಯುವ ವಾರಕ್ಕೆ ಒಂದು ಬಾರಿ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಶುದ್ಧ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದೆ. ಕನಿಷ್ಠ ಮೂರು ದಿನಗಳಿಗೆ ಒಮ್ಮೆಯಾದರೂ ನೀರು ಪೂರೈಕೆ ಮಾಡಿದರೆ ಅನುಕೂಲವಾಗುತ್ತದೆ.ಈ ಕುರಿತು ಸ್ಥಳೀಯ ಪುರಸಭೆ ಆಡಳಿತ ಮಂಡಳಿ ಕ್ರಮ ವಹಿಸಬೇಕು ಎನ್ನುವುದು ಸ್ಥಳೀಯ ನಿವಾಸಿ ಅಲ್ಲಾಬಕಾಷ್‌ ಬತ್ತೇರಿ ಅವರ ಒತ್ತಾಯ.

ಬೀದಿದೀಪಗಳು ಸರಿಯಾಗಿ ಬೆಳಗದ ಕಾರಣ, ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ರಾತ್ರಿ ವೇಳೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸುತ್ತವೆ. ಬೀದಿನಾಯಿಗಳ ಉಪಟಳವನ್ನು ತಪ್ಪಿಸಬೇಕಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ, ಉತ್ತಮ ನೈರ್ಮಲ್ಯ ವಾತಾವರಣ ಸೃಷ್ಟಿಸಬೇಕು ಎಂದುದಾದಾಫೀರ ಗವಾರಿ ಮನವಿ ಮಾಡಿದರು.

ಪಟ್ಟಣದ ಉಪ್ಪಾರ ಓಣಿಯಲ್ಲಿ ಪಕ್ಕಾ ಗಟಾರಗಳಿಲ್ಲದೆ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತದೆ. ಮನೆಗಳ ಅಡುಗೆ ಮನೆಯ ಹಸಿ ಕಸವನ್ನು ಸಮರ್ಪಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡದ ಕಾರಣ ಜನರು ರಸ್ತೆಬದಿ ತಂದು ಸುರಿಯುತ್ತಿದ್ದಾರೆ. ಇದನ್ನು ತಿನ್ನಲು ಹಂದಿ, ನಾಯಿಗಳು ದಾಳಿ ಇಡುತ್ತವೆ. ಇಡೀ ವಾತಾವರಣ ಕಲುಷಿತಗೊಂಡಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ಮುಖ್ಯ ಮಾರುಕಟ್ಟೆಗೆ ನಿತ್ಯ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.