ADVERTISEMENT

ಕಾಯ ಅಳಿವುದು ಕಾಯಕ ಉಳಿವುದು: ಬಸವಶಾಂತಲಿಂಗ ಸ್ವಾಮೀಜಿ

ದಾನಮ್ಮ ದೇವಿ ಜಾತ್ರೆ: ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 13:19 IST
Last Updated 4 ಡಿಸೆಂಬರ್ 2021, 13:19 IST
ಹಾವೇರಿ ನಗರದಲ್ಲಿ ದಾನಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭವನ್ನು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮತ್ತು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸಿದರು
ಹಾವೇರಿ ನಗರದಲ್ಲಿ ದಾನಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭವನ್ನು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮತ್ತು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸಿದರು   

ಹಾವೇರಿ:‘ಕಾಯ ಅಳಿವುದು ಕಾಯಕ ಉಳಿವುದು’ ಎಂಬ ವಾಣಿಯಂತೆ ಮನುಷ್ಯ ಸತ್ತ ನಂತರ ಅವನು ಮಾಡಿದ ಸತ್ಕಾರ್ಯ ಮಾತ್ರ ಚಿರಸ್ಥಾಯಿಯಾಗಿ ಉಳಿಯುತ್ತವೆ. ಶರಣರ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಂಡು ಆದರ್ಶ ಜೀವನ ನಡೆಸಿ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ನುಡಿದರು.

ಇಲ್ಲಿಯ ಜಯದೇವ ನಗರದಲ್ಲಿರುವ ದಾನಮ್ಮ ದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಜಾತ್ರಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಕಾಯಕ, ದಾಸೋಹ, ಸಮಭಾವ, ಮಾನವೀಯತೆ ಇವುಗಳು ಬಸವಾದಿ ಶರಣರು ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಾಗಿವೆ. ಸಮಾಜದಲ್ಲಿ ಅಶಕ್ತರಾದವರನ್ನು ಮೇಲಕ್ಕೆತ್ತುವುದೇ ಮಹತ್ಕಾರ್ಯವಾಗಿದೆ’ ಎಂದರು.

ADVERTISEMENT

ಮನಸ್ಸಿನ ಶುದ್ಧೀಕರಣ ಅಗತ್ಯ:

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ,‘ಮನಸ್ಸಿನ ಶುದ್ಧೀಕರಣಕ್ಕೆ ಧಾರ್ಮಿಕ ಕಾರ್ಯಗಳು ಪ್ರೇರಣೆಯಾಗುತ್ತವೆ.ದಾನಮ್ಮ ಹಾಗೂ ಬಸವಾದಿ ಶಿವಶರಣರ ಬದುಕು, ಬರಹ, ಆಚಾರ ವಿಚಾರಗಳು ಸರ್ವ ಕಾಲಕ್ಕೂ ಅನ್ವಯಿಸುವಂತಿವೆ’ ಎಂದು ಹೇಳಿದರು.

‘ಮನುಷ್ಯನ ಉನ್ನತಿ ಹಾಗೂ ಅವನತಿಗೆ ಅವನ ಮನಸ್ಸೇ ಮೂಲ ಕಾರಣವಾಗಿದೆ. ಒಳ್ಳೆಯ ದೇಹದಲ್ಲಿ ಒಳ್ಳೆಯ ಮನಸ್ಸು ಇದ್ದಾಗಲೇ ಅಂತಹ ಮನಸ್ಸಿಗೆ ಹಾಗೂ ವ್ಯಕ್ತಿತ್ವಕ್ಕೆ ಬೆಲೆ ಬರುತ್ತದೆ. ಮನಸ್ಸಿನ ಮೇಲೆ ಹಿಡಿತ ಸಾಧಿಸಿದವರು ಮಹಾತ್ಮರಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾವತಿ ಬೋಜರಾಜ ಪಾಟೀಲ್, ತೇಜಸ್ವಿನಿ ಅಶೋಕ ಕಾಶೆಟ್ಟಿ, ನಂದಿನಿ ಮಾಳದಕರ ಮಾತನಾಡಿದರು.

ಸನ್ಮಾನ:

ದಾಸೋಹ ಸೇವೆ ಸಲ್ಲಿಸಿದ ಲೀಲಾವತಿ ಸಿದ್ದೇಶ್ವರ ಮಾಗಾವಿ, ಜಯಶ್ರೀ ಸಿದ್ದಪ್ಪ ಮಾಗಾವಿ, ರೇಷ್ಮಾ ಗೌರಿಶಂಕರ ಮಾಗಾವಿ, ಸವಿತಾ ವಿರಕ್ತಮಠ ಸಂಜಯ ಮಾಗಾವಿ ಅವರನ್ನು ಸನ್ಮಾನಿಸಲಾಯಿತು. ಶಕ್ತಿ ವ್ರದ್ಧಾಶ್ರಮದ ಹಿರಿಯರಿಗೆ ವಸ್ತ್ರದಾನ, ಅಂಧ ಹಾಗೂ ವಿಶೇಷಚೇತನ ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು.

ಶನಿವಾರ ಬೆಳಿಗ್ಗೆ ಷಟ್‌ಸ್ಥಳ ಧ್ವಜಾರೋಹಣ ನೆರವೇರಿತು. ನಂತರ ದೇವಿಯ ಪಲ್ಲಕ್ಕಿ ಉತ್ಸವ ಜರುಗಿತು. ಭಕ್ತರಿಗೆ ಹೋಳಿಗೆ ವಿತರಿಸಲಾಯಿತು.

ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಶಿವಬಸಪ್ಪ ಮುದ್ದಿ ವಂದಿಸಿದರು. ರಾಜಶೇಖರ ಮಾಗಾವಿ, ಶಿವಯೋಗಿ ವಾಲೀಶೆಟ್ಟರ, ಶಿವಯೋಗಿ ಮುದ್ದಿ, ಶಿವಣ್ಣಾ ಕೋರಿಶೆಟ್ಟರ, ಮುರಿಗೆಪ್ಪ ಕಡೇಕೊಪ್ಪ, ಬೆಳಗಾವೆಪ್ಪ ಬೆಳಗಾವಿ, ಮಲ್ಲಣ್ಣ ಸಾತೇನಹಳ್ಳಿ, ಅಂದಾನೆಪ್ಪ ಗಡಾದ, ಬಾಬಣ್ಣ ಯಳಮಲ್ಲಿ, ಶೇಖಪ್ಪ ಹತ್ತಿ, ಶಿವಲಿಂಗಪ್ಪ ಕಲ್ಯಾಣಿ, ಇಂದೂಧರ ಯರೇಸಿಮಿ ಉಳಿವೆಪ್ಪ ಪಂಪಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.