ADVERTISEMENT

ಹಾವೇರಿ | ಸ್ವಾತಂತ್ರ್ಯೋತ್ಸವ ಸಿದ್ಧತೆ ಪರಿಶೀಲಿಸಿದ ಡಿ.ಸಿ

ಗೃಹ ಸಚಿವರಿಂದ ರಾಷ್ಟ್ರ ಧ್ವಜಾರೋಹಣ: ಜಿಲ್ಲಾ ಕ್ರೀಡಾಂಗಣದಲ್ಲಿ ಆಸನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 13:13 IST
Last Updated 14 ಆಗಸ್ಟ್ 2020, 13:13 IST
ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿಯ ಪಥಸಂಚಲನದ ಪೂರ್ವಭ್ಯಾಸವನ್ನು‌ ವೀಕ್ಷಣೆ ಮಾಡಿದರು
ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಅವರು ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿಯ ಪಥಸಂಚಲನದ ಪೂರ್ವಭ್ಯಾಸವನ್ನು‌ ವೀಕ್ಷಣೆ ಮಾಡಿದರು   

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ನಡೆಯಲಿರುವ 74ನೇ ಸ್ವಾತಂತ್ರ್ಯ ದಿನಾಚರಣೆಗೆ ನಡೆಸಿರುವ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಪರಿಶೀಲನೆ ನಡೆಸಿದರು.

ಶುಕ್ರವಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಕ್ರೀಡಾಂಗಣದ ಸಿದ್ಧತೆ, ಗಣ್ಯರಿಗೆ ಆಹ್ವಾನಿತರಿಗೆ ಅಂತರದಲ್ಲಿ ಆಸನ ವ್ಯವಸ್ಥೆ, ಕವಾಯತ್‍ನಲ್ಲಿ ಭಾಗವಹಿಸುವ ಗೃಹರಕ್ಷಕದಳ ಹಾಗೂ ಪೊಲೀಸ್ ಪಥಸಂಚಲನದ ಪೂರ್ವಭ್ಯಾಸ‌ ವೀಕ್ಷಣೆ ಮಾಡಿದರು.

ಅಂದು ಬೆಳಿಗ್ಗೆ 7.45ಕ್ಕೆ ಎಲ್ಲ ಗಣ್ಯರು ಹಾಗೂ ಅಧಿಕಾರಿಗಳು ಹುತಾತ್ಮ ಮೈಲಾರ ಮಹಾದೇವ ವೃತ್ತದಲ್ಲಿರುವ ಮೈಲಾರ ಮಹಾದೇವರ ಪ್ರತಿಮೆಗೆ ಮಾರ್ಲಾಪಣೆ ಕಾರ್ಯಕ್ರಮ, ಬೆಳಿಗ್ಗೆ 9 ಗಂಟೆಗೆ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ರಾಷ್ಟ್ರ ಧ್ವಜಾರೋಹಣ, ಬೆಳಿಗ್ಗೆ 9.5ಕ್ಕೆ ಪಥ ಪರಿವೀಕ್ಷಣೆ, 9.15ಕ್ಕೆ ಪಥ ಸಂಚಲನ, 9-30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಾತಂತ್ರ್ಯೋತ್ಸವ ಸಂದೇಶ ಹಾಗೂ 10 ಗಂಟೆಗೆ ಕೊರೊನಾ ವಾರಿಯರ್ಸ್‌ಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಕುರಿತಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ADVERTISEMENT

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ನೆಹರು ಓಲೇಕಾರ ವಹಿಸಲಿದ್ದಾರೆ. ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ಕೃಷಿ ಸಚಿವ ಬಿ.ಸಿ.ಪಾಟೀಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ತಹಶೀಲ್ದಾರ್‌ ಶಂಕರ, ಡಿ.ವೈ.ಎಸ್.ಪಿ. ಸಂತೋಷಕುಮಾರ ವಿಜಯಕುಮಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕಾಣದ ಸಡಗರ:ನಗರದ ಎಂ.ಜಿ.ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತಗಳಲ್ಲಿ ವಿವಿಧ ಗಾತ್ರದ ಬಾವುಟಗಳ ಮಾರಾಟ ಪ್ರತಿ ವರ್ಷ ಜೋರಾಗಿ ನಡೆಯುತ್ತಿತ್ತು. ಆದರೆ, ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಅಷ್ಟಾಗಿ ವ್ಯಾಪಾರದ ಭರಾಟೆ ಇರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ವ್ಯಾಪಾರವಾಗಿಲ್ಲ ಎಂದು ಬೀದಿಬದಿ ವ್ಯಾಪಾರಸ್ಥರು ಸಮಸ್ಯೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.