ADVERTISEMENT

ಬ್ಯಾಡಗಿ: ಅತಿವೃಷ್ಟಿ ಹಾನಿಗೆ ಪರಿಹಾರ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 15:52 IST
Last Updated 25 ಜೂನ್ 2025, 15:52 IST
ವಿರೂಪಾಕ್ಷಪ್ಪ ಬಳ್ಳಾರಿ
ವಿರೂಪಾಕ್ಷಪ್ಪ ಬಳ್ಳಾರಿ   

ಬ್ಯಾಡಗಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಶೇ 70ರಷ್ಟು ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ಮೊಳಕೆಯೊಡೆದ ಸಸಿಗಳು ಕೊಳೆಯುತ್ತಿವೆ. ಮರು ಬಿತ್ತನೆ ಅನಿವಾರ್ಯವಾಗಿದ್ದು, ಅಂತಹ ರೈತರ ನೆರವಿಗೆ ಬರಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆಗ್ರಹಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೆಕ್ಟೇರ್‌ಗೆ ₹ 10 ಸಾವಿರ ಅತಿವೃಷ್ಟಿ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು. ಬೆಳೆ ವಿಮೆಗೆ ಬಿತ್ತನೆ ಮಾಡಿ ಕನಿಷ್ಠ 30 ದಿನಗಳಾಗಿರಬೇಕು. ಆದರೆ ಪ್ರಸ್ತುತ ಬಿತ್ತನೆ ಮಾಡಿದ ಕಾಳುಗಳು ಭೂಮಿಯ ಮೇಲೇಳದೆ ರೈತರು ಹಾನಿ ಅನುಭವಿಸಿದ್ದಾರೆ. ಕಾರಣ ಬೆಳೆವಿಮೆ ತುಂಬುವ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಮಟಕಾ ಸಕ್ರಿಯ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಮಟಕಾ ಇನ್ನೂ ಸಕ್ರಿಯವಾಗಿದೆ. ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಪೊಲೀಸ್‌ ಇಲಾಖೆಗೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎನ್ನುವುದಕ್ಕೆ ಸ್ವಪಕ್ಷೀಯ ಶಾಸಕರೇ ಆರೋಪಿಸುತ್ತಿದ್ದಾರೆ. ಸರ್ಕಾರ ಯುವನಿಧಿ ಹಣ ಬಿಡುಗಡೆ ಮಾಡದೇ ಯುವಕರಿಗೆ ಮೋಸ ಮಾಡಿದೆ’ ಎಂದು ಆರೋಪಿಸಿದರು.

ನಗರ ಆಶ್ರಯ ಸಮಿತಿ ರಚನೆಯಲ್ಲಿಯೂ ಲೋಪವಿದೆ. ಆಶ್ರಯ ಯೋಜನೆಯಡಿ ಮನೆಗಳ ವಿತರಣೆಗೆ 814 ಅರ್ಜಿಗಳ ಪೈಕಿ 434 ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಪುರಸಭೆಯ 17 ಬಿಜೆಪಿ ಸದಸ್ಯರನ್ನು ಹೊರಗಿಟ್ಟು ಆಯ್ಕೆಪಟ್ಟಿ ತಯ್ಯಾರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪುರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.