ಬ್ಯಾಡಗಿ: ತಾಲ್ಲೂಕಿನ ಛತ್ರ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಸೋಮವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಘಟಕ ವ್ಯವಸ್ಥಾಪಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
‘ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಹಾಯ್ದು ಹೋಗಿದ್ದರೂ ಬಸ್ ಸೌಲಭ್ಯದಿಂದ ವಂಚಿತವಾಗಿದೆ. ಗ್ರಾಮಕ್ಕೆ ಪಟ್ಟಣದಿಂದ ತೆರಳಲು ಟೆಂಪೊ, ಆಟೋ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಗ್ರಾಮಕ್ಕೆ ಬಸ್ ಬಿಡದೇ ಸಾರಿಗೆ ಘಟಕದ ವ್ಯವಸ್ಥಾಪಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೆಣಸಿನಕಾಯಿ ಮಾರುಕಟ್ಟೆಗೆ ಸಾವಿರಾರು ಜನರು ನಿತ್ಯ ಕೆಲಸಕ್ಕೆ ಬರುತ್ತಿದ್ದರೂ ನಮ್ಮ ಬೇಡಿಕೆಗೆ ಸಾರಿಗೆ ಸಂಸ್ಥೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಗ್ರಾಮದ ಮೂಲಕ ಹೋಗುತ್ತಿದ್ದ ಒಂದು ಬಸ್ ಅನ್ನು ಹಠಾತ್ ಸ್ಥಗಿತಗೊಳಿಸಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದಕ್ಕಿಂತ ಮೊದಲು ಮೋಟೆಬೆನ್ನೂರು–ರಾಣಿಬೆನ್ನೂರು ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ 19ಕ್ಕೂ ಹೆಚ್ಚು ಬಸ್‌ಗಳು ಗ್ರಾಮದಲ್ಲಿ ನಿಲುಗಡೆಯಾಗುತ್ತಿದ್ದವು. ಆದರೆ ಈಗ ಅವು ಯಾವೂ ನಿಲ್ಲುತ್ತಿಲ್ಲ. ರಾಣೆಬೆನ್ನೂರು, ಹಾವೇರಿಗೆ ತೆರಳಿದವರು ಕಾಕೋಳ ಗ್ರಾಮಕ್ಕೆ ಇಳಿದು ನಡೆದುಕೊಂಡು ಗ್ರಾಮಕ್ಕೆ ಬರಬೇಕು. ಇಲ್ಲದಿದ್ದರೆ ಕಟ್ಮಾ ಮೂಲಕ ಗ್ರಾಮಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು, ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.