ADVERTISEMENT

ಗರ್ಭಕೋಶಕ್ಕೆ ಕತ್ತರಿ ಪ್ರಕರಣ: ಆರ್ಥಿಕ ನೆರವು ಘೋಷಣೆಗೆ ಆಗ್ರಹ

ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂತ್ರಸ್ತ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 15:53 IST
Last Updated 27 ಜನವರಿ 2023, 15:53 IST
‘ಗರ್ಭಕೋಶಕ್ಕೆ ಕತ್ತರಿ’ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ಬರುವ ಬಜೆಟ್‌ ಅಧಿವೇಶನದಲ್ಲಿ ‘ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಶುಕ್ರವಾರ ಹಾವೇರಿಯಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿ ಸಲ್ಲಿಸಿದರು 
‘ಗರ್ಭಕೋಶಕ್ಕೆ ಕತ್ತರಿ’ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ಬರುವ ಬಜೆಟ್‌ ಅಧಿವೇಶನದಲ್ಲಿ ‘ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು ಶುಕ್ರವಾರ ಹಾವೇರಿಯಲ್ಲಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿ ಸಲ್ಲಿಸಿದರು    

ಹಾವೇರಿ: ‘ಗರ್ಭಕೋಶಕ್ಕೆ ಕತ್ತರಿ’ ಪ್ರಕರಣದ ಸಂತ್ರಸ್ತ ಮಹಿಳೆಯರಿಗೆ ಬರುವ ಬಜೆಟ್‌ ಅಧಿವೇಶನದಲ್ಲಿ ‘ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು. ಇಲ್ಲದಿದ್ದರೆ ರಾಣೆಬೆನ್ನೂರಿನಿಂದ ರೈಲು ಮುಖಾಂತರ ನೂರಾರು ಮಹಿಳೆಯರು ಬೆಂಗಳೂರಿನ ಮುಖ್ಯಮಂತ್ರಿಯವರ ಸರ್ಕಾರಿ ನಿವಾಸದ ಮುಂದೆ ಧರಣಿ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮಹಿಳೆಯರು ಮನವಿ ಸಲ್ಲಿಸಿದರು.

ರಾಣೆಬೆನ್ನೂರಿನ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದ ಡಾ.ಪಿ.ಶಾಂತ ಅವರು 1522 ಮಹಿಳೆಯರ ಗರ್ಭಕೋಶವನ್ನು ಅನಧಿಕೃತವಾಗಿ ತೆಗೆದುಹಾಕಿದ ಪ್ರಕರಣ ಇದಾಗಿದೆ. ಶೇ 90ರಷ್ಟು ಲಂಬಾಣಿ ದಲಿತ ಮಹಿಳೆಯರನ್ನೇ ಗುರಿಯನ್ನಾಗಿಸಿಕೊಂಡು ನಡೆದಿರುವುದನ್ನು ಖಂಡಿಸಿ ದಿನಾಂಕ: 25-04-2022ರಂದು ವಿಶೇಷ ಆರ್ಥಿಕ ನೆರವು ಘೋಷಿಸಬೇಕೆಂದು ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಸಿಎಂ ನಿವಾಸದವರೆಗೂ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿತ್ತು.

ಪಾದಯಾತ್ರೆಯ 2ನೇ ದಿನ ಹಾವೇರಿಯ ನೆಲೋಗಲ್ಲ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ನಂತರ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ಆನಂತರ ಏಪ್ರಿಲ್‌ 28ರಂದು ಮುಖ್ಯಮಂತ್ರಿಯವರನ್ನು ಸಂತ್ರಸ್ತ ಮಹಿಳೆಯರ ನಿಯೋಗ ಭೇಟಿ ಮಾಡಿ ಸಮಸ್ಯೆ ತೋಡಿಕೊಂಡಿತ್ತು. ಪರಿಹಾರ ಕೊಡಿಸುವುದಾಗಿ ಸಿಎಂ ಭರವಸೆ ನೀಡಿದ್ದರು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ವಿಶೇಷ ಆರ್ಥಿಕ ನೆರವು ಬಿಡುಗಡೆಗೊಳಿಸಲು ಸರ್ಕಾರಕ್ಕೆ ದಿನಾಂಕ 17-09-2022ರಂದು ಸಮಗ್ರ ಪ್ರಸ್ತಾವ ಸಲ್ಲಿಸಲಾಗಿತ್ತು. ನಂತರ ಈ ಪ್ರಸ್ತಾವ ಕೂಡಲೇ ಜಾರಿಗೆ ಬರಲೆಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಮಹಿಳೆಯರು ದಿನಾಂಕ: 17-10-2022ರಂದು ಅಹೋರಾತ್ರಿ ಧರಣಿ ನಡೆಸಿದ್ದರು.

ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಇನ್ನು ನಮಗೆ ಕಾಯುವ ತಾಳ್ಮೆ ಉಳಿದಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ವಿಶೇಷ ಆರ್ಥಿಕ ನೆರವನ್ನು ಮುಂದಿನ ತಿಂಗಳು ನಡೆಯುವ ಬಜೆಟ್ ಅಧಿವೇಶನದಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಶಿವಪುತ್ರಪ್ಪ ಮಲ್ಲಾಡದ, ಲಲಿತವ್ವ ಲಮಾಣಿ, ಮಂಜವ್ವ ಚೌಡಕ್ಕನವರ, ಪಾರವ್ವ ಅಸುಂಡಿ, ಗಂಗವ್ವ ಲಮಾಣಿ,ಕ ಕವಿತಾ ಲಮಾಣಿ, ನಿಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಗುತ್ತೆವ್ವ ಲಮಾಣಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.