ADVERTISEMENT

ಹಾವೇರಿ: ತಿಳವಳ್ಳಿ ತಾಲ್ಲೂಕು ಕೇಂದ್ರ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:50 IST
Last Updated 21 ಜುಲೈ 2025, 3:50 IST
ತಿಳವಳ್ಳಿ ತಾಲ್ಲೂಕು ರಚನೆಯ ಕಾಲ್ಪನಿಕ ನಕ್ಷೆ.
ತಿಳವಳ್ಳಿ ತಾಲ್ಲೂಕು ರಚನೆಯ ಕಾಲ್ಪನಿಕ ನಕ್ಷೆ.   

ತಿಳವಳ್ಳಿ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ನೂತನ ತಾಲ್ಲೂಕುಗಳನ್ನು ರಚನೆ ಮಾಡದೇ ಇರುವುದು ನಿರಾಸೆ ಮೂಡಿಸಿದೆ. ಮುಂದಿನ ಬಜೆಟ್‌ನಲ್ಲಿ ತಿಳವಳ್ಳಿಯನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು’ ಎಂದು ತಿಳವಳ್ಳಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಹನುಮಂತಪ್ಪ ಶಿರಾಳಕೊಪ್ಪ ಆಗ್ರಹಿಸಿದರು.

ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ತಾಲ್ಲೂಕು ಹೋರಾಟ ಸಮಿತಿಯ ಸಭೆ ಉದ್ದೇಶಿಸಿ ಮಾತನಾಡಿದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ‘ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡಬೇಕು. ಸಮಯಕ್ಕೆ ಸರಿಯಾಗಿ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಸಭೆಗೆ ಹಾಜರಾಗಬೇಕು. ಅನೇಕ ರೀತಿಯ ಉಗ್ರ ಹೋರಾಟಗಳನ್ನು ಕೈಗೊಳ್ಳಬೇಕು. 21 ಗ್ರಾಮ ಪಂಚಾಯತಿಗಳ 70 ಗ್ರಾಮಗಳಿಗೆ ಬೇಟಿ ನೀಡಿ ತಾಲ್ಲೂಕು ಹೋರಾಟ ರೂಪರೇಶಗಳ ಬಗ್ಗೆ ತಿಳಿಸಬೇಕು’ ಎಂದರು.

ADVERTISEMENT

ತಾಲ್ಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಶಿವಪುತ್ರಪ್ಪ ಗೌಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಣೇಶಪ್ಪ ಕೋಡಿಹಳ್ಳಿ, ಬಸವರಾಜ ನರೇಂದ್ರ, ಶಿವಲಿಂಗಪ್ಪ ತಲ್ಲೂರ, ಕುಮಾರ ಲಕ್ಮೋಜಿ, ರಾಜು ಶೇಷಗಿರಿ, ಚಾಮರಾಜ ಹಕ್ಲಣ್ಣನವರ, ಆರೀಪ್ ಲೋಹಾರ, ಮಹಾದೇವಪ್ಪ ತಳವಾರ, ಭವಾನೇಪ್ಪ, ಹನುಮಂತಪ್ಪ ದಿಬ್ಬಣ್ಣನವರ, ದುರುಗಪ್ಪ ಗೊರನವರ, ಮಾಲತೇಶ ಮಡಿವಾಳರ, ಮಧುಕರ ಹುನಗುಂದ ಇದ್ದರು.

ತಿಳವಳ್ಳಿ ತಾಲ್ಲೂಕು ರಚನೆಗೆ ಸೂಕ್ತ ಸ್ಥಳ

ಹಾನಗಲ್‌ ತಾಲ್ಲೂಕಿನ 15 ಗ್ರಾಮ ಪಂಚಾಯಿತಿ, ಹಿರೇಕೆರೂರ, ಬ್ಯಾಡಗಿ ತಾಲ್ಲೂಕಿನ ತಲಾ 3 ಗ್ರಾಮ ಪಂಚಾಯಿತಿ ಸೇರಿ ಒಟ್ಟು 70 ಗ್ರಾಮಗಳ ಕೇಂದ್ರ ಸ್ಥಾನವಾಗಿ ತಿಳವಳ್ಳಿ ಗುರುತಿಸಿಕೊಳ್ಳುತ್ತದೆ.

ತಿಳವಳ್ಳಿ ತಾಲ್ಲೂಕು ರಚನೆಗೆ ಮತ್ತು ತಾಲ್ಲೂಕಿನಲ್ಲಿ ಸೇರ್ಪಡೆಗೆ 21 ಗ್ರಾಮ ಪಂಚಾಯ್ತಿಗಳು ಒಮ್ಮತ ವ್ಯಕ್ತಪಡಿಸಿವೆ.

ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 70 ಗ್ರಾಮಗಳ ಅಂದಾಜು 1.35 ಲಕ್ಷ ಜನರಿಗೆ ತಿಳವಳ್ಳಿ 15 ಕಿ.ಮೀ ವ್ಯಾಪ್ತಿಯ ಕೇಂದ್ರ ಸ್ಥಾನವಾಗಿದ್ದು, ತಾಲ್ಲೂಕು ರಚನೆಗೆ ಯೋಗ್ಯವಾಗಿದೆ ಎಂದು ತಾಲ್ಲೂಕು ಹೋರಾಟ ಸಮಿತಿ ಮುಖಂಡರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.