ಹಾವೇರಿ: ‘ಪ್ರಬಲ ಜಾತಿಗೆ ಸೇರದ ಸಣ್ಣ ಸಮಯದಾಯದಿಂದ ಬಂದ ದೇವರಾಜ ಅರಸು ಅವರು ಜಾತಿ ಇಲ್ಲದೇ ಬೆಳೆದು ರಾಜಕೀಯದಲ್ಲಿ ಕ್ರಾಂತಿ ಮಾಡಿದರು. ಸರ್ವ ಧರ್ಮ ಹಾಗೂ ಜಾತಿಯ ಜನರಿಗಾಗಿ ಯೋಜನೆ ರೂಪಿಸಿ, ಕರ್ನಾಟಕದ ಅಸ್ಮಿತೆ ಉಳಿಸಿದರು’ ಎಂದು ಶಿಗ್ಗಾವಿ ಚನ್ನಪ್ಪ ಕನ್ನೂರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ದ್ಯಾಮನಕೊಪ್ಪ ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘28 ವರ್ಷ ಶಾಸಕ ಹಾಗೂ 9 ವರ್ಷ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರಂಥ ರಾಜಕಾರಣಿ ನಮಗೆ ಎಂದಿಗೂ ಸಿಗುವುದಿಲ್ಲ. ಅಂಥವರ ಬಗ್ಗೆ ಮಾತನಾಡಲು ದಿನ ಸಾಲುವುದಿಲ್ಲ. ಆದರೆ, ಇಂದಿನ ರಾಜಕಾರಣ ನೋಡಿದರೆ ಏನು ಮಾತನಾಡಲೇ ಬಾರದು ಎಂದೆನಿಸುತ್ತದೆ’ ಎಂದು ಹೇಳಿದರು.
‘ಮೈಸೂರು ಮಹಾರಾಜರು ಸ್ಥಾಪಿಸಿದ್ದ ಬೋರ್ಡಿಂಗ್ ಶಾಲೆಯಲ್ಲಿ ಓದಿದ್ದ ದೇವರಾಜ ಅವರು, 26ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿದರು. ಸ್ವಾತಂತ್ರ್ಯ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. 1952ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಆಯ್ಕೆಯಾದರು. ಅದೇ ಕ್ಷೇತ್ರದಲ್ಲಿ 28 ವರ್ಷ ಅವರೇ ಶಾಸಕರಾಗಿದ್ದರು. ಮುಖ್ಯಮಂತ್ರಿಯಾದ ಎಂಟೇ ತಿಂಗಳಿನಲ್ಲಿ ಹಿಂದುಳಿದ ವರ್ಗದ ಆಯೋಗ ರಚಿಸಿದರು. ದೇಶದಲ್ಲಿಯೇ ಮೊದಲ ಬಾರಿಗೆ ಮೀಸಲಾತಿ ನೀಡಿದ ಕರ್ನಾಟಕವಾಯಿತು’ ಎಂದರು.
‘1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದರು. ಆ ಮೂಲಕ ಕರ್ನಾಟಕದ ಅಸ್ಮಿತೆ ಉಳಿಸಿದರು. 1974ರಲ್ಲಿ ಉಳುವವನೇ ಭೂ ಒಡೆಯ ಕಾನೂನು ಜಾರಿಗೊಳಿಸಿ, 8 ಲಕ್ಷ ರೈತರಿಗೆ 11 ಲಕ್ಷ ಎಕರೆ ಜಮೀನು ಕೊಡಿಸಿದರು. ಜೀತ ಪದ್ಧತಿ ನಿಷೇಧಿಸಿದರು. ಬಡ್ಡಿ ಕಿರುಕುಳ ತಡೆಗೆ ಋಣಭಾರ ಕಾಯ್ದೆ ತಂದರು. ಅರಣ್ಯ ಉಳಿಸಲು ವೃಕ್ಷ ಅರಣ್ಯ ನೀತಿ ಜಾರಿಗೊಳಿಸಿದರು. ಬಡ–ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿಗಾಗಿ ಹಾಸ್ಟೆಲ್‌ಗಳನ್ನು ರೂಪಿಸಿದರು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಇಂದಿನ ಯುವ ರಾಜಕಾರಣಿಗಳು ಹಾಗೂ ಯುವಜನತೆ ದೇವರಾಜ ಅರಸು ಅವರ ಆದರ್ಶಗಳನ್ನು ಪಾಲಿಸಬೇಕು. ಅವಾಗಲೇ ಅವರ ಜನ್ಮದಿನಾಚರಣೆ ಸಾರ್ಥಕ’ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಹಾಗೂ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಅವರು ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ. ಮೈದೂರ, ಎಚ್.ವೈ.ಮೀಸೆ, ಕಲ್ಯಾಣಿ ಕಾಂಬ್ಳೆ, ಆರ್. ಸುಬ್ರಾ ನಾಯ್ಕ್ ಇದ್ದರು.
‘ಇಂದಿರಾ ಗಾಂಧಿ ಅವರು ಉತ್ತರ ಭಾರತದಲ್ಲಿ ಚುನಾವಣೆಯಲ್ಲಿ ಸೋತಾಗ ಅವರನ್ನು ಚಿಕ್ಕಮಗಳೂರಿಗೆ ಕರೆತಂದು 70 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರು. ಇದರಿಂದ ಅವರ ಕೀರ್ತಿ ರಾಷ್ಟ್ರಮಟ್ಟದಲ್ಲಿ ಹೆಚ್ಚಾಯಿತು. ಅವಾಗಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ದೂರವಿಡಲಾಯಿತು. ರಾತ್ರಿ ಮುಖ್ಯಮಂತ್ರಿಯಾಗಿ ಮಲಗಿದ್ದ ದೇವರಾಜ ಅರಸು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿಯಾಗಿದ್ದರು. ಇವರ ಉಪಕಾರದಿಂದ ಆರಿಸಿ ಬಂದ ಶಾಸಕರು ಋಣ ಮರೆತು ಸ್ವಾರ್ಥ ಸಾಧಿಸಿದರು. ಅರಸು ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು’ ಎಂದು ನಾಗರಾಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.