ADVERTISEMENT

ಕ್ಷೇತ್ರದ ಅಭಿವೃದ್ಧಿಯೊಂದೇ ಗುರಿ

ಜಾತಿ– ಧರ್ಮ ಭೇದಭಾವ ಮಾಡಲ್ಲ: ಶ್ರೀನಿವಾಸ್ ಮಾನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:53 IST
Last Updated 11 ಅಕ್ಟೋಬರ್ 2021, 2:53 IST
ಇನಾಂ ನೀರಲಗಿಯಲ್ಲಿ ಹಾನಗಲ್ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತಯಾಚನೆ ಕೈಗೊಂಡರು
ಇನಾಂ ನೀರಲಗಿಯಲ್ಲಿ ಹಾನಗಲ್ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತಯಾಚನೆ ಕೈಗೊಂಡರು   

ಅಕ್ಕಿಆಲೂರ: ‘ಇಷ್ಟು ವರ್ಷಗಳ ರಾಜಕೀಯ ಪಯಣದಲ್ಲಿ ಎಂದಿಗೂ ನಾನು ಜಾತಿ, ಧರ್ಮಗಳ ಆಧಾರದಲ್ಲಿ ಭೇದಭಾವ ಮಾಡಿಲ್ಲ, ಶ್ರೀಮಂತ-ಬಡವ ಎಂದು ಎಣಿಸಿಲ್ಲ. ಎಲ್ಲರೂ ಒಂದೇ, ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಕಣ್ಮುಂದೆ’ ಎಂದು ಹಾನಗಲ್ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹೇಳಿದರು.

ಭಾನುವಾರ ಹಾನಗಲ್ ತಾಲ್ಲೂಕಿನ ಹುಲಗಿನಹಳ್ಳಿ, ಇನಾಂ ನೀರಲಗಿ, ಮತ್ತಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದರು. ಐತಿಹಾಸಿಕ ಪುಣ್ಯಭೂಮಿ ಎನಿಸಿರುವ ಹಾನಗಲ್ ಕ್ಷೇತ್ರದ ಜನರ ಸೇವೆ ಮಾಡುವ ಸದಾವಕಾಶ ಒದಗಿ ಬಂದಿರುವುದು ನನ್ನ ಪಾಲಿನ ಸೌಭಾಗ್ಯ’ ಎಂದರು

‘ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದ ಚುನಾವಣೆಯಲ್ಲಿ ಹೊಸಮುಖವಾಗಿ ಸ್ಪರ್ಧಿಸಿದರೂ ಅಲ್ಪ ಮತಗಳ ಅಂತರದಿಂದ ಗೆಲುವಿನ ದಡ ತಲುಪಲಾಗಲಿಲ್ಲ. ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಎನ್ನುವುದನ್ನು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದಿರುವ ನಾನು ನುಡಿದಂತೆ ಈ ಕ್ಷೇತ್ರದಲ್ಲಿಯೇ ಮನೆ ಮಾಡಿ ವಿನಮ್ರ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಾನಗಲ್ ಕ್ಷೇತ್ರದ ಪ್ರತಿಯೊಬ್ಬರ ಭವಿಷ್ಯದ ದಿನಗಳನ್ನು ಸುಂದರವಾಗಿಸಬೇಕು ಎನ್ನುವುದು ನನ್ನ ಅದಮ್ಯ ಬಯಕೆ. ಈ ಆಶಯಕ್ಕೆ ತಾವೆಲ್ಲ ಜೊತೆಗಿದ್ದು, ಆಶೀರ್ವಸಿ’ ಎಂದು ಮನವಿ ಮಾಡಿದರು.

ADVERTISEMENT

ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮತಯಾಚನೆ ಕೈಗೊಂಡ ಸಮಯದಲ್ಲಿ ಅಭಿಮಾನಿಗಳು ಶ್ರೀನಿವಾಸ್ ಮಾನೆ ಪರ ಘೋಷಣೆ ಕೂಗಿದರು.

ಪ್ರಮುಖರಾದ ನಾಗರಾಜ್ ಪಾಟೀಲ, ಸಿದ್ದನಗೌಡ ಪಾಟೀಲ, ಮಾರುತಿ ಪುರಲಿ, ಹನುಮಂತಪ್ಪ ಮಲಗುಂದ, ಹನುಮಂತ ಆಲಳ್ಳಿ, ನಿಂಗಪ್ಪ ಪೂಜಾರ, ಮಹದೇವಪ್ಪ ಹಿರೇಕಾಂಶಿ, ಗಣಪತಿ ಆನವಟ್ಟಿ, ಗಣಪತಿ ಕುಮರಿ, ಬಸಪ್ಪ ಕಾಡಣ್ಣನವರ, ಚನ್ನಪ್ಪ ಹಾವೇರಿ, ಮಹಾಂತಪ್ಪ ಹಾನಗಲ್, ರವಿ ಕುರಿಯವರ, ಮಂಜಪ್ಪ ಶೃಂಗೇರಿ, ರಾಘು ಹಾನಗಲ್, ವೀರಭದ್ರಗೌಡ ಪಾಟೀಲ, ಬಸವರಾಜ್ ಪುರಲಿ, ವಿಷ್ಣು ಆನವಟ್ಟಿ, ಚಂದ್ರು ಮಣ್ಣವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.