ADVERTISEMENT

ಹಾವೇರಿ | ಧರ್ಮಸ್ಥಳದ ಅಪಪ್ರಚಾರ; ಭಕ್ತರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಆಕ್ರೋಶ | ಕೇರಳ ಸರ್ಕಾರದ ಕುಮ್ಮಕ್ಕು: ಆರೋಪ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:26 IST
Last Updated 13 ಆಗಸ್ಟ್ 2025, 2:26 IST
‘ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಭಕ್ತರು ಮಂಗಳವಾರ ಪ್ರತಿಭಟನೆ ನಡೆಸಿದರು
‘ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಭಕ್ತರು ಮಂಗಳವಾರ ಪ್ರತಿಭಟನೆ ನಡೆಸಿದರು   

ಹಾವೇರಿ: ‘ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥಸ್ವಾಮಿ ನೆಲೆಸಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿ ಕ್ಷೇತ್ರದ ಭಕ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಭಕ್ತರು, ‘ಧರ್ಮ ಸಂರಕ್ಷಣೆ, ನಮ್ಮೆಲ್ಲರ ಹೊಣೆ’, ‘ಧರ್ಮೋರಕ್ಷತಿ ರಕ್ಷಿತಃ’, ‘ಜೈ ಧರ್ಮಸ್ಥಳ’, ‘ಧರ್ಮ ರಕ್ಷಣೆಗಾಗಿ ಧರ್ಮ ಸೈನಿಕರಾಗೋಣ’ ಸೇರಿದಂತೆ ವಿವಿಧ ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು.

ಧರ್ಮಸ್ಥಳ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲೆಯ ಎಂಟು ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಜೈನ ಸಮುದಾಯದವರು, ರೈತ ಸಂಘಟನೆಗಳು, ಶ್ರೀರಾಮಸೇನೆ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.

ADVERTISEMENT

ಸೌಜನ್ಯ ಹೆಸರಿನಲ್ಲಿ ಅಪಪ್ರಚಾರ: ‘ಅತ್ಯಾಚಾರವಾಗಿ ಕೊಲೆಯಾಗಿರುವ ಸೌಜನ್ಯ ಹೆಸರು ಮುಂದಿಟ್ಟುಕೊಂಡು  ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

‘ಸುಮಾರು ವರ್ಷಗಳ ಹಿಂದೆ ಸೌಜನ್ಯ ಕೊಲೆಯಾಗಿತ್ತು. ಇದೇ ವಿಚಾರವಾಗಿ ಧರ್ಮಸ್ಥಳದಲ್ಲಿ ಗಲಾಟೆಯೂ ಆಗಿತ್ತು. ಆರೋಪಿ ಎನ್ನಲಾದ ಸಂತೋಷ ರಾವ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಖುದ್ದು ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಸಿಬಿಐ ತನಿಖೆಯೂ ಆಯಿತು. ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ ರಾವ್ ನಿರಪರಾಧಿಯಾಗಿ ಹೊರಬಂದರು. ಇದೀಗ, ಮಹೇಶ ತಿಮ್ಮರೋಡಿ, ಗಿರೀಶ ಮಟ್ಟಣ್ಣನವರ. ಯೂಟ್ಯೂಬರ್ ಸಮೀರ್‌ ಹಾಗೂ ಇತರರು ವೀರೇಂದ್ರ ಹೆಗ್ಗಡೆ ಅವರನ್ನು ಗುರಿಯಾಗಿಸಿಕೊಂಡು ಹೋರಾಟ ಆರಂಭಿಸಿದ್ದಾರೆ’ ಎಂದು ಹೇಳಿದರು.

‘ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರು ತನಿಖೆಗೆ ಎಲ್ಲ ರೀತಿಯಿಂದಲೂ ಸಹಕರಿಸಿದ್ದಾರೆ. ಅವರಿಗೂ ಕೃತ್ಯಗಳಿಗೂ ಯಾವುದೇ ಸಂಬಂಧವಿಲ್ಲವೆಂಬುದು ತನಿಖೆಯಿಂದ ಸಾಬೀತಾಗಿದೆ. ಅಷ್ಟಾದರೂ ವೀರೇಂದ್ರ ಹೆಗ್ಗಡೆ ಕುಟುಂಬದ ಮೇಲೆ ಆಪಾದನೆ ಮಾಡುವುದು ನಿಲ್ಲುತ್ತಿಲ್ಲ’ ಎಂದು ತಿಳಿಸಿದರು.

ಶವ ಹೂತಿರುವುದಾಗಿ ಹಸಿಸುಳ್ಳು: ‘ಸೌಜನ್ಯ ರೀತಿಯಲ್ಲಿ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಅವರ ಶವವನ್ನು ಹೂತಿರುವುದಾಗಿ ಹೇಳಿ ಭೀಮ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ. ಆದರೆ, ಈತ ಹೇಳುವುದೆಲ್ಲವೂ ಹಸಿ ಸುಳ್ಳು. ಈತ ತೋರಿಸಿದ್ದ 13 ಸ್ಥಳದಲ್ಲಿ ಯಾವುದೇ ಮೃತದೇಹ ಸಿಕ್ಕಿಲ್ಲ. ಒಂದು ಸ್ಥಳದಲ್ಲಿ ಆಸ್ಥಿಪಂಜರ ಸಿಕ್ಕಿದ್ದರೂ ಅದು 40 ವರ್ಷಕ್ಕಿಂತ ಹಳೆಯದು’ ಎಂದು ಪ್ರತಿಭಟನಕಾರರು ಹೇಳಿದರು.

‘ಧರ್ಮಸ್ಥಳದ ನಂಬಿಕೆ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಧರ್ಮಸ್ಥಳವನ್ನು ಹಾಳು ಮಾಡಬೇಕು. ಧರ್ಮಾಧಿಕಾರಿ ಮೇಲಿರುವ ನಂಬಿಕೆ, ಮಂಜುನಾಥಸ್ವಾಮಿ ಮೇಲೆ ಇರುವ ಶ್ರದ್ಧೆ ಹಾಳು ಮಾಡಬೇಕೆಂದು ಕೆಲವರು ಈ ರೀತಿ ಮಾಡುತ್ತಿದ್ದಾರೆ. ಶಬರಿಮಲೈಯ ಸ್ವಾಮಿ ಅಯ್ಯಪ್ಪ, ಶನಿ ಶಿಂಗ್ಣಾಪುರ, ದತ್ತಪೀಠದ ಮೇಲೆಯೂ ಇದೇ ರೀತಿ ಪ್ರಯತ್ನ ನಡೆದಿತ್ತು. ಕೇರಳದ ಕಮ್ಯುನಿಸ್ಟ್‌ ಸರ್ಕಾರ ಇದರ ಹಿಂದೆ ಕೆಲಸ ಮಾಡುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಯಿತು.

‘ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಭಕ್ತರು ಮಂಗಳವಾರ ಪ್ರತಿಭಟನೆ ನಡೆಸಿದರು

ಸೌಜನ್ಯ ಹೆಸರಿನಲ್ಲಿ ಅಪಪ್ರಚಾರ ಹಿಂದೂ ಕ್ಷೇತ್ರಗಳೇ ಗುರಿ ಷಡ್ಯಂತ್ರದ ವಿರುದ್ಧ ಕ್ರಮಕ್ಕೆ ಆಗ್ರಹ

ಸೌಜನ್ಯ ಹೆಸರಿನಲ್ಲಿ ತಂದೆ–ತಾಯಿ ವ್ಯಾಪಾರ’

‘ಧರ್ಮಸ್ಥಳದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಹೆಸರಿನಲ್ಲಿ ಅವರ ತಂದೆ-ತಾಯಿ  ವ್ಯಾಪಾರ ಮಾಡುತ್ತಿದ್ದಾರೆ. ಸೌಜನ್ಯ ಸತ್ತಾಗ ಅವರ ಮನೆ ಸ್ಥಿತಿ ಹೇಗಿತ್ತು? ಈಗ ಹೇಗಿದೆ? ಎಂಬುದನ್ನು ನೋಡಿದರೆ ಎಲ್ಲವೂ ತಿಳಿಯುತ್ತದೆ’ ಎಂದು ಧರ್ಮಸ್ಥಳ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ಜಿಲ್ಲಾ ಸಂಚಾಲಕ ಕಲ್ಯಾಣಕುಮಾರ ಶೆಟ್ಟರ ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಹಿಂದೆ ಕಮ್ಯೂನಿಸ್ಟ್‌ರು ಇದ್ದಾರೆ. ಕೇರಳ ಸರ್ಕಾರವೂ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ’ ಎಂದು ಆರೋಪಿಸಿದರು. ‘ಅಪಪ್ರಚಾರದ ಹೋರಾಟಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ವೀರೇಂದ್ರ ಹೆಗ್ಗಡೆ ಅವರ ಪರ ನಿಲ್ಲಬೇಕು. ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕೆಂದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು. ‘ನಕಲಿ ಯೂಟ್ಯೂಬರ್‌ಗಳು ಹುಟ್ಟಿಕೊಂಡಿದ್ದಾರೆ. ಸಮಾಜಘಾತುಕರಿಂದ ಹಣ ಪಡೆದುಕೊಂಡು ಧರ್ಮಸ್ಥಳದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂಥ ನಕಲಿ ಯೂಟ್ಯೂಬರ್‌ಗಳ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಇದಾದ ನಂತರ ಗಾಯಗೊಂಡವರನ್ನು ನೋಡಲು ಎಸ್‌ಡಿಪಿಐ ಕಮ್ಯೂನಿಸ್ಟ್‌ ಪಕ್ಷದವರು ಬಂದಿದ್ದರು. ಇದನ್ನು ನೋಡಿದರೆ ಅಪಪ್ರಚಾರದ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.