ADVERTISEMENT

ಹಾವೇರಿ: ಸ್ಪರ್ಧಾರ್ಥಿಗಳಿಗೆ ನೆರವಾದ ಡಿಜಿಟಲ್‌ ಗ್ರಂಥಾಲಯ

ತಂತ್ರಜ್ಞಾನ ಸಹಿತ ಗ್ರಂಥಾಲಯ: ದಿನಪತ್ರಿಕೆ, ವಾರಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು ಲಭ್ಯ

ಎಸ್.ಎಸ್.ನಾಯಕ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST
ಕೊಡಿಯಾಲ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯದಲ್ಲಿ ಕಂಪ್ಯೂಟರ್‌ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು  –ಪ್ರಜಾವಾಣಿ ಚಿತ್ರ 
ಕೊಡಿಯಾಲ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಗ್ರಂಥಾಲಯದಲ್ಲಿ ಕಂಪ್ಯೂಟರ್‌ ಕಲಿಕೆಯಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು  –ಪ್ರಜಾವಾಣಿ ಚಿತ್ರ    

ಕುಮಾರಪಟ್ಟಣ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಜೀವನಕ್ಕೊಂದು ಉದ್ಯೋಗ ಹಿಡಿಯಬೇಕೆನ್ನುವ ಹಂಬಲ ಒಂದೆಡೆಯಾದರೆ, ಮತ್ತೊಂದೆಡೆ ಆರ್ಥಿಕ ಸಂಕಷ್ಟದ ನಡುವೆ ದುಬಾರಿ ಬೆಲೆಯ ಪುಸ್ತಕ ಕೊಳ್ಳಲು ಸಾಧ್ಯವಾಗದೆ ಪರಿತಪಿಸುವ ವಿದ್ಯಾರ್ಥಿಗಳು. ಅಂತಹ ವಿದ್ಯಾರ್ಥಿಗಳ ಕನಸು ಸಾಕಾರಗೊಳಿಸಲು ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಗ್ರಾಮ ಪಂಚಾಯ್ತಿ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಿದೆ.

‘ಮೊದಲಿಗೆ ಹೆಸರಿಗೆ ಮಾತ್ರ ಗ್ರಂಥಾಲಯ ಎನ್ನುವಂತೆ ಸೌಲಭ್ಯಗಳಿಲ್ಲದೆ ಸೊರಗಿತ್ತು. ಓದುಗರು ಗ್ರಂಥಾಲಯ ಇರುವುದನ್ನೇ ಮರೆತಿದ್ದರು. ಸರ್ವ ಸದಸ್ಯರ ಶೈಕ್ಷಣಿಕ ಕಾಳಜಿ ಮತ್ತು ಒತ್ತಾಸೆಯಂತೆ ನವೀನ ಮಾದರಿಯಲ್ಲಿ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ಗ್ರಂಥಾಲಯಕ್ಕೆ ‘ಪುಸ್ತಕ ಮನೆ’ ಎಂಬ ಹೆಸರಿಟ್ಟು ಹೊಸ ಮೆರುಗು ನೀಡಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್‌ ಪೂಜಾರ.

ಜಿಲ್ಲಾ ಗ್ರಂಥಾಲಯ 2000 ಪುಸ್ತಕಗಳನ್ನು ಒದಗಿಸಿದೆ. ಶಾಲಾ ಮಕ್ಕಳು ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ₹1 ಲಕ್ಷ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿಸಲಾಗಿದೆ. ಕಂಪ್ಯೂಟರ್‌ ಹಾಗೂ ಪ್ರೊಜೆಕ್ಟರ್‌ ಜೊತೆಗೆ ಇತರೆ ಸಂಪನ್ಮೂಲಗಳ ಪೂರೈಕೆಗಾಗಿ ₹2.5 ಲಕ್ಷ ಖರ್ಚು ಮಾಡಲಾಗಿದೆ ಎಂದು ಚೇತನ್‌ ವಿವರಿಸಿದರು.

ADVERTISEMENT

ಪರಿಣತರಿಂದ ತರಬೇತಿ:‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿರುವ ಆಸಕ್ತ ವಿದ್ಯಾರ್ಥಿಗಳಿಗೆ ಧಾರವಾಡ ಮತ್ತು ವಿಜಯಪುರದ ತರಬೇತಿ ಸಂಸ್ಥೆಗಳ ಪರಿಣತರಿಂದ ಒಂದು ತಿಂಗಳ ತರಬೇತಿ, ವಾರದಲ್ಲಿ ಎರಡು ದಿನ ಕಂಪ್ಯೂಟರ್‌ ಶಿಕ್ಷಣ ಮತ್ತು ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಂಬಿಕಾ ಕಿರಣ್‌.

ಮುಂದಿನ ದಿನಗಳಲ್ಲಿ ‘ಪುಸ್ತಕ ಜೋಳಿಗೆ’ ಕಾರ್ಯಕ್ರಮದ ಮೂಲಕ ಇನ್ನಷ್ಟು ಪುಸ್ತಕಗಳನ್ನು ಸಂಗ್ರಹಿಸುವ ಯೋಜನೆಯಿದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಯಾವುದೇ ಸಂಘ-ಸಂಸ್ಥೆ, ಪುಸ್ತಕ ಪ್ರೇಮಿಗಳು ಪುಸ್ತಕಗಳನ್ನು ಪೂರೈಸಿದರೆ ಅವುಗಳನ್ನು ಗ್ರಂಥಾಲಯದಲ್ಲಿ ಇರಿಸುವ ಆಶಯ ವ್ಯಕ್ತಪಡಿಸುತ್ತಾರೆ.

ಗ್ರಾಮ ಪಂಚಾಯಿತಿಯಲ್ಲಿ ಓದಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಲ್ಲಿರುವ ಸಾಮಗ್ರಿಗಳು ಉಪಯುಕ್ತವಾಗಿವೆ ಎನ್ನುತ್ತಾರೆ ಸ್ಪರ್ಧಾರ್ಥಿಗಳಾದ ಮಾರುತಿ ಚಿನ್ನಣ್ಣನವರ ಮತ್ತು ಮಂಜು ರಾಜಪ್ಪನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.