ADVERTISEMENT

ಅನರ್ಹರಿಗೂ ಅಂಗವಿಕಲ ಪ್ರಮಾಣ ಪತ್ರ

ತಪ್ಪಿತಸ್ಥ ತಾಲ್ಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:54 IST
Last Updated 29 ಆಗಸ್ಟ್ 2024, 14:54 IST
ಬ್ಯಾಡಗಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಅಂಗವಿಕಲರ ಕುಂದು ಕೊರತೆ ಸಭೆ ಏರ್ಪಡಿಸಲಾಗಿತ್ತು
ಬ್ಯಾಡಗಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಅಂಗವಿಕಲರ ಕುಂದು ಕೊರತೆ ಸಭೆ ಏರ್ಪಡಿಸಲಾಗಿತ್ತು   

ಬ್ಯಾಡಗಿ: ‘ಪಟ್ಟಣದ ತಾಲ್ಲೂಕು ಆಸ್ಪತ್ರೆಯ ತಜ್ಞ ವೈದ್ಯರು ಅನರ್ಹರಿಗೂ ಅಂಗವಿಕಲರ ಪ್ರಮಾಣ ಪತ್ರ ನೀಡುತ್ತಿರುವ ಪರಿಣಾಮ ಅರ್ಹರನ್ನು ಅನುಮಾನದಿಂದ ನೋಡುವಂತಾಗಿದೆ. ತಪ್ಪಿತಸ್ಥ ವೈದ್ಯರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ವಿಶೇಷ ಚೇತನರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸುತಾರ ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಆರೋಪ ಮಾಡಿದ ಪಾಂಡುರಂಗ ಅವರು, ‘ಸುಳ್ಳು ಪ್ರಮಾಣ ಪತ್ರ ಪಡೆದವರ ಹಾವಳಿ ಮೀತಿಮೀರಿದ್ದು, ದುಡ್ಡು ಕೊಟ್ಟರೆ ಶೇ90 ರಷ್ಟು ನ್ಯೂನ್ಯತೆಗಳಿವೆ ಎಂದು ವೈದ್ಯರು ಪ್ರಮಾಣ ಪತ್ರ ನೀಡುತ್ತಾರೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಫೀರೋಜ್‌ಷಾ ಸೋಮನಕಟ್ಟಿ, ‘ಅಂಗವಿಕಲರ ಸೌಲಭ್ಯಕ್ಕೆ ಬಂದ ಅರ್ಜಿಗಳನ್ನು ಖುದ್ದಾಗಿ ಪರೀಶೀಲಿಸಿದ್ದೇನೆ. ಶೇ99 ರಷ್ಟು ಜನರಿಗೆ ಯಾವುದೇ ನ್ಯೂನ್ಯತೆಗಳಿಲ್ಲ ಎಂಬುದು ಜಿಲ್ಲಾ ಹಂತದಲ್ಲಿ ಪರೀಕ್ಷಿಸಿದಾಗ ತಿಳಿದು ಬಂದಿದೆ. ತಾಲ್ಲೂಕು ಆಸ್ಪತ್ರೆ ವೈದ್ಯರಿಗೆ ತಪ್ಪು ತಿದ್ದಿಕೊಳ್ಳುವಂತೆ ಸೂಚನೆ ನೀಡಿದ್ದರೂ, ಪ್ರಯೋಜನವಾಗಿಲ್ಲ. ತನಿಖೆಯಿಂದ ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಫಲಾನುಭವಿ ಗಣೇಶ ಬಡಿಗೇರ ಮಾತನಾಡಿ, ತಾಲ್ಲೂಕಿನೆಲ್ಲೆಡೆ ಹೆಚ್ಚಿನ ಜನರು ಸುಳ್ಳು ಪ್ರಮಾಣ ಪತ್ರ ಪಡೆದು ಮಾಶಾಸನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂಗವಿಕಲರ ಗುರುತಿನ ಚೀಟಿಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಶಾಂತಾ ಪಟ್ಟಣಶೆಟ್ಟಿ ಮಾತನಾಡಿ, ಅಂಗವಿಕಲರಿಗೆ ಮೀಸಲಿಟ್ಟ ಅನುದಾನ ಬೇರೆಯವರ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಸಂಚಾಲಕ ನಾಗರಾಜ ದಿಳ್ಳೆಪ್ಪನವರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ಬಿಇಒ ಎಸ್.ಜಿ.ಕೋಟಿ, ಸಿಡಿಪಿಒ ವೈ.ಟಿ.ಪೂಜಾರ, ಸಾಮಾಜಿಕ ಹೋರಾಟಗಾರ್ತಿ ಕೆ.ಸಿ.ಅಕ್ಷತಾ, ಈರಪ್ಪ ಮಾಚಾಪುರ, ವೀರಭದ್ರಪ್ಪ ಬಂಕಾಪುರ, ನಾಗರಾಜ ಅಗಸನಹಳ್ಳಿ, ಈರಣ್ಣ ನೂರಂದವರ, ಸರೋಜಮ್ಮ ಮೂಡೇರ, ಚೈತ್ರಾ ಹರಿಜನ, ಅಕ್ಕಮ್ಮ ಗೋಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.