ADVERTISEMENT

ಕೋವಿಡ್‌ ನಿರ್ವಹಣೆ: ಲೋಪ ಸರಿಪಡಿಸಿ

ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ನಡೆದ ದಿಶಾ ಸಭೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 14:58 IST
Last Updated 31 ಜುಲೈ 2020, 14:58 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯು ಸಂಸದ ಶಿವಕುಮಾರ ಉದಾಸಿ ಅಧ್ಯಕ್ಷತೆಯಲ್ಲಿ ನಡೆಯಿತು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯು ಸಂಸದ ಶಿವಕುಮಾರ ಉದಾಸಿ ಅಧ್ಯಕ್ಷತೆಯಲ್ಲಿ ನಡೆಯಿತು    

ಹಾವೇರಿ: ಕೋವಿಡ್ ನಿರ್ವಹಣೆಗೆ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದೆ. ನಿರ್ವಹಣೆಯಲ್ಲಿ ಲೋಪ ಕಾಣುತ್ತದೆ. ಸಮರ್ಪಕ ನಿರ್ವಹಣೆಗೆ ಪ್ರತಿ ತಾಲ್ಲೂಕಿಗೆಒಬ್ಬರಂತೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಕ ಮಾಡಲು ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಮಾತನಾಡಿದರು.

ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ, ಸಕಾಲದಲ್ಲಿ ಚಿಕಿತ್ಸೆ, ಆಂಬುಲೆನ್ಸ್‌ ಸೌಲಭ್ಯ ಸೇರಿದಂತೆ ಹಲವು ನ್ಯೂನತೆ ಕುರಿತಂತೆ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಲೋಪವನ್ನು ತಕ್ಷಣವೇ ಪರಿಹರಿಸಬೇಕು. ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಹೊಣೆಗಾರಿಕೆ ನೀಡಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ಜವಾಬ್ದಾರಿಯುತ ವೈದ್ಯರಿಗೆ ಮೇಲುಸ್ತುವಾರಿ ನೀಡಿ ಕೋವಿಡ್ ವಿಷಯಗಳನ್ನು ವ್ಯವಸ್ಥಿತ ನಿರ್ವಹಣೆಗೆ ಸೂಚನೆ ನೀಡಿದರು.

ADVERTISEMENT

ಹಾವೇರಿ ಹಾಗೂ ರಾಣೆಬೆನ್ನೂರ ಶಾಸಕರು ಸಭೆಯಲ್ಲಿ ಮಾತನಾಡಿ, ಕೋವಿಡ್ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿದೆ. ಆದರೂ ಕ್ವಾರಂಟೈನ್ ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ನೀಡುವಲ್ಲಿ ಲೋಪಗಳಾಗಿವೆ ಎಂದು ಸಭೆಯ ಗಮನಸೆಳೆದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಮಾತನಾಡಿ, ಅಧಿಕಾರಿಗಳ ಸಭೆ ಕರೆದು, ಲೋಪ ಸರಿಪಡಿಸಲಾಗುವುದು. ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿ ವಹಿಸಲಾಗುವುದು. ಹಾಸಿಗೆ ಕೊರತೆ ಕಂಡುಬಂದರೆ ಅಕ್ಕಪ್ಕದ ಜಿಲ್ಲೆಗಳ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಸಂಪರ್ಕಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಜಲಜೀವನ ಯೋಜನೆ, ಪ್ರಧಾನಮಂತ್ರಿ ಕೌಶಲ ಯೋಜನೆ, ಸ್ವಚ್ಛಬಾರತ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ನೀಡಿದರು.

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.