ADVERTISEMENT

ಕಾರ್ಮಿಕರ ಖಾತೆಗಳಿಗೆ ₹91 ಕೋಟಿ ಜಮಾ: ಶಿವರಾಮ ಹೆಬ್ಬಾರ್‌

1.91 ಲಕ್ಷ ಅರ್ಜಿಗಳ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 13:58 IST
Last Updated 26 ಜನವರಿ 2022, 13:58 IST
ಶಿವರಾಮ ಹೆಬ್ಬಾರ್
ಶಿವರಾಮ ಹೆಬ್ಬಾರ್   

ಹಾವೇರಿ: ‘2017ರಿಂದ 2020ರವರೆಗೆ ಒಟ್ಟು ಕಾರ್ಮಿಕ ಇಲಾಖೆಯಲ್ಲಿ 3,02,600 ಅರ್ಜಿಗಳು ಬಾಕಿ ಇದ್ದವು. 2021ರ ನ.1ರಿಂದ ಡಿ.31ರವರೆಗೆ ರಾಜ್ಯದಾದ್ಯಂತ ‘ಕಾರ್ಮಿಕ ಅದಾಲತ್‌’ ಕಾರ್ಯಕ್ರಮ ನಡೆಸಿ, 1,91,856 ಅರ್ಜಿಗಳನ್ನು ಇತ್ಯರ್ಥಿಪಡಿಸಿ, ₹91 ಕೋಟಿಯನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಿದ್ದೇವೆ. ಇತಿಹಾಸದಲ್ಲಿ ಇಂಥ ದೊಡ್ಡ ಕ್ರಾಂತಿಕಾರಿ ಅದಾಲತ್‌ ನಡೆದಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ.ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ 363 ಅಸಂಘಟಿತ ಕಾರ್ಮಿಕರಿಗೆ ‘ಶ್ರಮ ಸಮ್ಮಾನ್‌’ ಪ್ರಶಸ್ತಿ ಪ್ರದಾನ ಕೋವಿಡ್‌ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದೆ. ಕೋವಿಡ್‌ ಕಡಿಮೆಯಾದ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಕಾರ್ಮಿಕ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಆಯಾಮ ನೀಡಿದ್ದಾರೆ. ‘ಇ–ಶ್ರಮ’ ಎಂಬ ಹೊಸ ಪೋರ್ಟಲ್‌ ಅನ್ನು ಆರಂಭಿಸಲಾಗಿದೆ. 390 ವರ್ಗದ ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ 46 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಮೃತಪಟ್ಟರೆ ಅಟಲ್‌ಜೀ ಯೋಜನೆಯ ಮೂಲಕ ₹2 ಲಕ್ಷ ಪರಿಹಾರ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾದರೆ ₹1.5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದರು.

ADVERTISEMENT

₹400 ಕೋಟಿ ವಿದ್ಯಾರ್ಥಿ ವೇತನ:

ರಾಜ್ಯದಲ್ಲಿ ಸುಮಾರು 4.75 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಒಟ್ಟು ₹210 ಕೋಟಿಯಷ್ಟು ‘ವಿದ್ಯಾರ್ಥಿ ವೇತನ’ ನೀಡಲಾಗುತ್ತಿತ್ತು. ನಮ್ಮ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ವಿದ್ಯಾರ್ಥಿ ವೇತನವನ್ನು ₹400 ಕೋಟಿಗೆ ಹೆಚ್ಚಳ ಮಾಡಿದ್ದೇವೆ. ಮೊದಲು ಈ ಯೋಜನೆ ಅನುಷ್ಠಾನದಲ್ಲಿ ಹಲವಾರು ಲೋಪದೋಷಗಳಿದ್ದು, ಏಜೆಂಟರ ಹಾವಳಿಯಿತ್ತು. ಹೀಗಾಗಿ ಮುಖ್ಯಮಂತ್ರಿಯವರ ಸೂಚನೆಯಂತೆ, ಆನ್‌ಲೈನ್‌ ಮೂಲಕ ₹400 ಕೋಟಿ ಹಣವನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಅವರ ಅಕೌಂಟ್‌ಗೆ ಹಾಕುವ ವ್ಯವಸ್ಥೆ ಆರಂಭಿಸಿದ್ದೇವೆ ಎಂದರು.

ಹಾವೇರಿ ಜಿಲ್ಲೆಯಲ್ಲಿ ಒಳ್ಳೆಯ ಅಧಿಕಾರಿಗಳ ತಂಡವಿದೆ. ಕೆಲವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಸ ಮಾಡಿದವರಿದ್ದಾರೆ. ಕಾರ್ಯಾಂಗ ಮತ್ತು ಶಾಸಕಾಂಗ ಜೊತೆ ಜೊತೆಯಲ್ಲಿ ಕೆಲಸ ಮಾಡಲಿದೆ ಎಂದರು.ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಮತ್ತು ಯಾವುದಾದರೂ ಲೋಪ ಕಂಡುಬಂದರೆ ನನ್ನ ಗಮನಕ್ಕೆ ತಂದರೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.