ADVERTISEMENT

ಹಾವೇರಿ | ರಸಗೊಬ್ಬರ ವಿತರಣೆ; ಲೋಪವಾಗದಂತೆ ಕ್ರಮವಹಿಸಿ

ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 14:41 IST
Last Updated 29 ಏಪ್ರಿಲ್ 2022, 14:41 IST
ಹಾವೇರಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು, ಸಹಕಾರ ಸಂಘಗಳ ಪ್ರತಿನಿಧಿಗಳು, ಕೃಷಿ ಪರಿಕರ ಮಾರಾಟಗಾರರು ಪಾಲ್ಗೊಂಡಿದ್ದರು
ಹಾವೇರಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು, ಸಹಕಾರ ಸಂಘಗಳ ಪ್ರತಿನಿಧಿಗಳು, ಕೃಷಿ ಪರಿಕರ ಮಾರಾಟಗಾರರು ಪಾಲ್ಗೊಂಡಿದ್ದರು   

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಕ್ರಮವಹಿಸಲು ಹಾಗೂ ಕೃತಕ ಅಭಾವ ಸೃಷ್ಟಿಸದಂತೆ ಡೀಲರ್‌ಗಳಿಗೆ ಹಾಗೂ ಸಹಕಾರ ಸಂಘಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 2022-23ನೇ ಸಾಲಿನ ಮುಂಗಾರು ಹಂಗಾಮು ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಅಗತ್ಯಕ್ಕಿಂತ ಹೆಚ್ಚಿಗೆ ರಸಗೊಬ್ಬರ ಜಿಲ್ಲೆಗೆ ಸರಬರಾಜಾಗಿತ್ತು. ಆದರೆ ಈ ವರ್ಷ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ತೊಂದರೆಯಾಗಿದ್ದು, ಮುಂಬರುವ ದಿನಗಳಲ್ಲಿ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಣೆಯಲ್ಲಿ ಸಮಸ್ಯೆಯಾಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದರು.

ADVERTISEMENT

ರಸಗೊಬ್ಬರ ಹಂಚಿಕೆಗೆ ಮೈಕ್ರೋಲೆವಲ್ ಯೋಜನೆ ರೂಪಿಸಬೇಕು. ಭೂಮಿಯ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ವಿತರಣೆ ಮಾಡಬೇಕು. ಈ ಕುರಿತು ತಾಲ್ಲೂಕು ಮಟ್ಟದಲ್ಲಿ ರೈತ ಪ್ರತಿನಿಧಿನಿಗಳ ಸಭೆ ಮಾಡಿ ಅವರಿಗೆ ಮಾಹಿತಿ ನೀಡಬೇಕು. ಪ್ರತಿ ಮಾರಾಟಗಾರರು ಅಂಗಡಿಯ ಸೂಚನಾ ಫಲಕದಲ್ಲಿ ರಸಗೊಬ್ಬರ ದಾಸ್ತಾನು, ಮಾರಾಟದ ವಿವರ, ದರ ನಮೂದಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿತ್ತು. 119.90 ವಾಡಿಕೆ ಮಳೆ ಎದುರು 97.60 ರಷ್ಟು (ಶೇ 81.40) ಮಳೆಯಾಗಿದೆ. ಮೇ ಕೊನೆಯವಾರ ಅಥವಾ ಜೂನ್ ಮೊದಲ ವಾರದಲ್ಲಿ ಬಿತ್ತನೆ ಆರಂಭವಾಗಲಿದ್ದು, ಏಕದಳ, ದ್ವಿದಳ, ಎಣ್ಣೆಕಾಲು, ವಾಣಿಜ್ಯ ಬೆಳೆಗಳು ಸೇರಿ 3,30,639 ಹೆಕ್ಟೇರ್‌ ಪ್ರದೇಶ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ.

ಪ್ರಸಕ್ತ ಮುಂಗಾರು ಹಂಗಾಮಿಗೆ ಸೋಯಾ ಅವರೆ, ಶೇಂಗಾ, ಗೋವಿನಜೋಳ ಸೇರಿದಂತೆ ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗೆ 36,660 ಕ್ವಿಂಟಲ್ ಬಿತ್ತನೆ ಬೀಜದ ವಿತರಣೆ ಬೇಡಿಕೆ ಅಂದಾಜಿಸಲಾಗಿದೆ. 19 ರೈತ ಸಂಪರ್ಕ ಕೇಂದ್ರಗಳು, 21 ಸಹಕಾರಿ ಸಂಘಗಳು ಹಾಗೂ ಹೆಚ್ಚುವರಿಯಾಗಿ 20 ಮಾರಾಟ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಕ್ರಮವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಯೂರಿಯಾ ಹಾಗೂ ಡಿಎಪಿ ಗೊಬ್ಬರವನ್ನು ಅಧಿಕ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರುಗಳು ಬಂದಿವೆ. ಹಾಗಾಗಿ ಸರ್ಕಾರದ ನಿಗದಿಪಡಿಸಿದ ದರದಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು.

24 ಸಾವಿರ ಮೆ.ಟನ್‌ ರಸಗೊಬ್ಬರ ಲಭ್ಯ:ಕೃಷಿ ಇಲಾಖೆ ಜಂಟಿನಿರ್ದೇಶಕ ಮಂಜುನಾಥ್ ಮಾತನಾಡಿ, ‘ಮುಂಗಾರು ಹಂಗಾಮಿಗೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಯೂರಿಯಾ 58,459 ಮೆ.ಟನ್, ಡಿಎಪಿ 25,848 ಮೆ.ಟನ್, ಎಮ್‍ಒಪಿ 5,911 ಮೆ.ಟನ್, ಕಾಂಪ್ಲೆಕ್ಸ್ 46,957 ಮೆ.ಟನ್ ಹಾಗೂ ಎಸ್.ಎಸ್.ಪಿ 702 ಮೆ.ಟನ್ ಸೇರಿ 1,37,916 ಮೆ.ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಕಾಲಕಾಲಕ್ಕೆ ಸರಬರಾಜು ಮಾಡಲಾಗುವುದು. ಈಗ 24,223 ಮೆ.ಟನ್ ದಾಸ್ತಾನು ಲಭ್ಯವಿದ್ದು, ರಸಗೊಬ್ಬರ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು, ಸಹಕಾರಿ ಸಂಘಗಳ ಪ್ರತಿನಿಧಿಗಳು , ಕೃಷಿ ಪರಿಕರ ಮಾರಾಟಗಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.