ADVERTISEMENT

ಡಿಜೆ ಸಂಸ್ಕೃತಿ ಆರೋಗ್ಯಕ್ಕೆ ಮಾರಕ: ಡಿ.ವೈ.ಎಸ್.ಪಿ

ಗಣೇಶ ಹಬ್ಬ, ಈದ್ ಮಿಲಾದ್ ಅಂಗವಾಗಿ ಶಾಂತಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:27 IST
Last Updated 25 ಆಗಸ್ಟ್ 2025, 4:27 IST
ಶಿಗ್ಗಾವಿ ಪಟ್ಟಣದ ಅಂಬೇಡ್ಕರ್ ಸಂಕೀರ್ಣದಲ್ಲಿ ಶನಿವಾರ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿ ಸಭೆಯಲ್ಲಿ ಡಿ.ವೈ.ಎಸ್.ಪಿ ಗುರುಶಾಂತಪ್ಪ ಮಾತನಾಡಿದರು
ಶಿಗ್ಗಾವಿ ಪಟ್ಟಣದ ಅಂಬೇಡ್ಕರ್ ಸಂಕೀರ್ಣದಲ್ಲಿ ಶನಿವಾರ ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿ ಸಭೆಯಲ್ಲಿ ಡಿ.ವೈ.ಎಸ್.ಪಿ ಗುರುಶಾಂತಪ್ಪ ಮಾತನಾಡಿದರು   

ಶಿಗ್ಗಾವಿ: ‘ಡಿಜೆ ಸಂಸ್ಕೃತಿ ಭಾರತೀಯರದ್ದಲ್ಲ. ಇದು ಆರೋಗ್ಯಕ್ಕೆ ಮಾರಕ. ಅದರಿಂದ ದೂರಾಗಬೇಕಿದೆ. ಭಾರತೀಯ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಳ್ಳಬೇಕಿದೆ. ಎಲ್ಲ ಸಮುದಾಯದ ಜನ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸಬೇಕು’ ಎಂದು ಡಿವೈಎಸ್‌‍ಪಿ ಗುರುಶಾಂತಪ್ಪ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಸಂಕೀರ್ಣದಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ‘ಡಿಜೆ ಬಳಕೆಗೆ ಕೋರ್ಟ್‌ ನಿರಾಕರಿಸಿದ್ದು, ಪ್ರತಿ ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಂಘದ ಪದಾಧಿಕಾರಿಗಳು ಡಿಜೆ ಬಳಕೆ ಬಿಟ್ಟು ಭಜನೆ, ಕಲಾತಂಡಗಳನ್ನು ಬಳಕೆ ಮಾಡಬೇಕು. ಯಾರಿಗೂ ಹಿಂಸೆ, ಕಿರಿಕಿರಿಯಾಗದಂತೆ ಎಚ್ಚರಿಕೆ ವಹಿಸಬೇಕು. ವೃದ್ಧರು, ಮಕ್ಕಳು ಸೇರಿದಂತೆ ಕಾಯಿಲೆ ಪೀಡಿತರಿಗೆ ಡಿಜೆಯಿಂದ ಅಪಾರ ತೊಂದರೆ ಆಗುತ್ತದೆ. ಹೀಗಾಗಿ ಕಾನೂನು ಪಾಲನೆ ಮಾಡಲು ಗಣೇಶ ಮಂಡಳಿ ಸಹಕಾರ ನೀಡಬೇಕು’ ಎಂದರು.

ಶಿಗ್ಗಾವಿ ಪೊಲೀಸ್ ಠಾಣೆಯ ಪಿ.ಎಸ್.ಐ ವೀರಭದ್ರಪ್ಪ ಹಿರೇಮಠ ಮಾತನಾಡಿ, ‘ಗಣೇಶ ಮಂಡಳಿಯವರು ತಹಶೀಲ್ದಾರರಿಂದ ಅನುಮತಿ ಪಡೆದು ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಪುರಸಭೆ ವತಿಯಿಂದ ಬ್ಯಾನರ್ ಹಾಕಲು ಅನುಮತಿ ಪಡೆಯಬೇಕು. ಗಣೇಶ ಮಂಡಳಿಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನಿಗಾ ವಹಿಸಬೇಕು’ ಎಂದರು.

ADVERTISEMENT

ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಹೆಸ್ಕಾಂ ಅಧಿಕಾರಿ ಬಸವರಾಜ ಬಂಡಿವಡ್ಡರ, ಅಗ್ನಿಶಾಮಕ ಠಾಣೆ ಅಧಿಕಾರಿ ವೆಂಕಟೇಶ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.