ADVERTISEMENT

ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಡಿಕೆಶಿ ಬಹಿರಂಗಪಡಿಸಲಿ: ಓಲೇಕಾರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:37 IST
Last Updated 23 ಜನವರಿ 2023, 15:37 IST
ಶಾಸಕ ನೆಹರು ಓಲೇಕಾರ ಅವರು ಪತ್ರಿಕಾಗೋಷ್ಠಿ ನಡೆಸಿದರು 
ಶಾಸಕ ನೆಹರು ಓಲೇಕಾರ ಅವರು ಪತ್ರಿಕಾಗೋಷ್ಠಿ ನಡೆಸಿದರು    

ಹಾವೇರಿ: ‘ನಮ್ಮ ಜಿಲ್ಲೆಯಲ್ಲಿ ನನ್ನನ್ನೂ ಸೇರಿದಂತೆ ಯಾವ ಬಿಜೆಪಿ ಶಾಸಕರೂ ಡಿ.ಕೆ.ಶಿವಕುಮಾರ್‌ ಅವರ ಸಂಪರ್ಕದಲ್ಲಿ ಇಲ್ಲ. ಇದ್ದರೆ ಹಾನಗಲ್‌ನ ಕಾಂಗ್ರೆಸ್ ಶಾಸಕ ಸಂಪರ್ಕದಲ್ಲಿರಬಹುದು. ಯಾವ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಮತ್ತು ಏನನ್ನು ಮಾತನಾಡಿದ್ದಾರೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಹಿರಂಗಪಡಿಸಬೇಕು’ ಎಂದು ಶಾಸಕ ನೆಹರು ಓಲೇಕಾರ ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮ್ಮ ಶಾಸಕರು ಕಾಂಗ್ರೆಸ್‌ ಸೇರುವುದು ಸತ್ಯಕ್ಕೆ ದೂರದ ಮಾತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಬೇರೆಯವರ ತೇಜೋವಧೆ ಮಾಡುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ರಾಜ್ಯ ನಾಯಕರಾದವರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದೇ ಅವರಿಗೆ ಗೊತ್ತಿಲ್ಲ. ಮಾತಿನ ಮೇಲೆ ಹಿಡಿತ ಇರಬೇಕು. ಸುಳ್ಳು ಹೇಳಿಕೆಯಿಂದ ಕಿಮ್ಮತ್ತು ಕಳೆದುಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.

ಸುಳ್ಳು ಹೇಳಿಕೆಗಳಿಗೆ ಕ್ಷೇತ್ರದ ಮತದಾರರು ಕಿವಿಗೊಡಬಾರದು. ಡಿಕೆಶಿ ಅವರ ಹೇಳಿಕೆ ಸುಳ್ಳಿನ ಕಂತೆ ಎಂದು ಜರಿದರು. ಮುಂದಿನ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಓಡುವ ಕುದುರೆಗೆ ಟಿಕೆಟ್‌ ಸಿಗಲಿದೆ. ಸುಭದ್ರ ಸರ್ಕಾರ ರಚನೆ ನಮ್ಮ ಗುರಿಯಾಗಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಅನರ್ಹರಿಗೆ ಮನೆ ಹಂಚಿಕೆ:

112 ಫಲಾನುಭವಿಗಳಿಗೆ ಜಿ+ ಮನೆಗಳನ್ನು ಹಂಚಿಕೆ ಮಾಡುವಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಸುಮಾರು 700 ಅನರ್ಹರಿಗೆ ಮನೆ ಹಂಚಿಕೆಯಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಇದನ್ನು ಪರಿಶೀಲಿಸಿ, ಅನರ್ಹರನ್ನು ಪಟ್ಟಿಯಿಂದ ಕಿತ್ತುಹಾಕಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ, ಹೊಸ ಪಟ್ಟಿ ತಯಾರಿಸಿದೆವು. ತಿಂಗಳೊಳಗೆ ಪಟ್ಟಾ ಕೊಡಲಾಗುವುದು ಎಂದರು.

150 ಸೀಟು ಭರ್ತಿ:

ಹಾವೇರಿ ಮೆಡಿಕಲ್‌ ಕಾಲೇಜಿನಲ್ಲಿ 150 ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಮೊದಲ ವರ್ಷದ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಮುಗಿದಿದೆ. ಆಡಳಿತ ಕಚೇರಿ, ತರಗತಿ ಕೊಠಡಿಗಳನ್ನು ಒಳಗೊಂಡ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಹಾವೇರಿ ನಗರದಲ್ಲಿ ₹10 ಕೋಟಿ ವೆಚ್ಚದಲ್ಲಿ ನೂತನ ಪ್ರವಾಸಿ ಮಂದಿರ, ಹೊಸರಿತ್ತಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ, ಹಾವೇರಿ–ಗುತ್ತಲ ಮುಖ್ಯರಸ್ತೆಗೆ ₹20 ಕೋಟಿ ವೆಚ್ಚದಲ್ಲಿ ಡಾಂಬರೀಕರಣ, ಏಳೆಂಟು ಕೆರೆಗಳನ್ನು ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ ಎಂದರು.

ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ, ಗಾಂಧಿ ಭವನ, ಹಾಲಿನ ಕೇಂದ್ರ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಚಾಲನೆ ಕೊಡಿಸಲಾಗುವುದು ಎಂದರು.

ಗುತ್ತಿಗೆದಾರರೇ ಹೊಣೆ:

ನಗರದ ಒಳಚರಂಡಿ ಮತ್ತು 24X7 ಕುಡಿಯುವ ನೀರು ಯೋಜನೆಗಳು ವಿಫಲವಾಗುವುದಕ್ಕೆ ಗುತ್ತಿಗೆದಾರರೇ ಕಾರಣ. ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಬದಲಿಸಲು ನಾವು ಹಿಂದೆ ಸೂಚನೆ ಕೊಟ್ಟಿದ್ದೆವು. ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಫೆ.1ರಂದು ಮುಕ್ತೇಶ್ವರ ದೇಗುಲ ಉದ್ಘಾಟನೆ

ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ₹6.5 ಕೋಟಿ ವೆಚ್ಚದಲ್ಲಿ ಮುಕ್ತೇಶ್ವರ ದೇಗುಲ ನಿರ್ಮಾಣ ಪೂರ್ಣಗೊಂಡಿದ್ದು, ಫೆ.1ರಂದು ದೇಗುಲವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಜ.26ರಿಂದ ಧ್ವಜಾರೋಹಣ, ಸಂಜೆ ಶಿವಪುರಾಣ ಕಾರ್ಯಕ್ರಮ ನಡೆಯಲಿದೆ. ಜ.31ರಂದು ಶ್ರೀಶೈಲ ಮತ್ತು ಉಜ್ಜಯನಿ ಶ್ರೀಗಳ ಸಾನ್ನಿಧ್ಯದಲ್ಲಿ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ. ಫೆ.2ರಂದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಶಾಸಕ ನೆಹರು ಓಲೇಕಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.