ADVERTISEMENT

ವೈದ್ಯರ ಕೊರತೆ: ಬೊಮ್ಮಾಯಿ ಕಳವಳ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 2:25 IST
Last Updated 23 ಸೆಪ್ಟೆಂಬರ್ 2025, 2:25 IST
ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸಂಸದ ಬಸವರಾಜ ಬೊಮ್ಮಾಯಿ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಅಭಿಯಾನಕ್ಕೆ ಚಾಲನೆ ನೀಡಿದರು
ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸಂಸದ ಬಸವರಾಜ ಬೊಮ್ಮಾಯಿ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಅಭಿಯಾನಕ್ಕೆ ಚಾಲನೆ ನೀಡಿದರು   

ಗುತ್ತಲ: ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಹಾಸಿಗೆ ಮತ್ತು ರೋಗಿಗಳ ಅನುಪಾತದಲ್ಲಿಯೂ ಸಾಕಷ್ಟು ವ್ಯತ್ಯಾಸ ಇದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಗಮನ ಹರಿಸಬೇಕಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಹಾವೇರಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ‘ಸ್ವಸ್ಥ ನಾರಿ ಸಶಕ್ತ ಪರಿವಾರ’ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮುದಾಯದ ಆರೋಗ್ಯ ಬಹಳ ಮುಖ್ಯ. ಆರೋಗ್ಯದಲ್ಲಿ ಹಲವಾರು ಪ್ರಕಾರ ಇದೆ. ಒಂದು ವ್ಯಕ್ತಿಯ ಆರೋಗ್ಯ, ಸಮುದಾಯದ ಆರೋಗ್ಯ ರಾಜ್ಯ ಮತ್ತು ದೇಶದ ಆರೋಗ್ಯ. ವ್ಯಕ್ತಿಯ ಆರೋಗ್ಯ ಚೆನ್ನಾಗಿದ್ದರೆ ಕುಟುಂಬದ ಆರೋಗ್ಯ, ಸಮುದಾಯ ಆರೋಗ್ಯ, ರಾಜ್ಯ, ದೇಶದ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿಸಿದರು.

ADVERTISEMENT

ಸ್ವಸ್ತ ನಾರಿ ಸಶಕ್ತ ಪರಿವಾರ ಕಾರ್ಯಕ್ರಮದ ಲಾಭವನ್ನು ಜನರು ಪಡೆಯಬೇಕು. ಆಯುಷ್ಮಾನ ಭಾರತ ಯೋಜನೆಯ ಮೂಲಕ ಕೇಂದ್ರ ಸರ್ಕಾರ ₹5 ಲಕ್ಷ ಮೊತ್ತದ ವರೆಗಿನ ಆರೋಗ್ಯ ಚಿಕಿತ್ಸೆ ಕೊಡುತ್ತದೆ. ಕರ್ನಾಟಕದಲ್ಲಿ ಎರಡು ಕೊಟಿಗಿಂತ ಹೆಚ್ಚು ಜನರು ಇದರ ಲಾಭ ಪಡೆಯುತ್ತಿದ್ದಾರೆ. ಇದರೊಂದಿಗೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗ್ಗದ ದರದಲ್ಲಿ ಜನರು ಔಷಧ ಪಡೆಯುತ್ತಿದ್ದಾರೆ ಎಂದರು.

ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಎಂ.ಜಯಾನಂದ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಪ್ರಭಾಕರ ಕುಂದೂರ, ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಹಾವನೂರ, ಮುಖಂಡರಾದ ಸಿ.ಬಿ ಕುರುವತ್ತಿಗೌಡ್ರ, ಶಿವಪ್ಪ ತೋಟದ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಾಳವ್ವ ನೀಲಪ್ಪ ಗೊರವರ, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.