ADVERTISEMENT

ಸಚಿವ ಸ್ಥಾನಕ್ಕೆ ಒತ್ತಡ ಹಾಕಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:20 IST
Last Updated 15 ಜನವರಿ 2020, 14:20 IST
ಯಡಿಯೂರಪ್ಪ
ಯಡಿಯೂರಪ್ಪ   

ಹಾವೇರಿ: ‘ರಾಜ್ಯದ ವಾಸ್ತವ ಸ್ಥಿತಿ ಅರಿತುಕೊಳ್ಳದೆ, ಎಲ್ಲ ಸಮುದಾಯದವರು ತಮ್ಮವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಒತ್ತಡ ಹಾಕಿದರೆ ಅದನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾಗುತ್ತದೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ನರಸೀಪರದಲ್ಲಿ ಬುಧವಾರ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ‘ಹರಜಾತ್ರೆ’ಯಲ್ಲಿ ನಡೆದಂಥ ಘಟನೆಗಳನ್ನು ಎದುರಿಸುವುದು ನಮಗೆ ಅನಿವಾರ್ಯ. ದಿಂಗಾಲೇಶ್ವರ ಶ್ರೀ, ನಿಡುಮಾಮಿಡಿ ಶ್ರೀ ಈ ಘಟನೆಯ ಬಗ್ಗೆ ನೊಂದುಕೊಂಡು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ ಮುಂದಿನ 3 ವರ್ಷ ಅಭಿವೃದ್ಧಿಪರವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

18 ಶಾಸಕರು ರಾಜೀನಾಮೆ ನೀಡಿ, 6 ತಿಂಗಳು ವನವಾಸ ಅನುಭವಿಸಿದರು. ಅವರ ನೆರವಿನಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. ಅವರಲ್ಲಿ 15ರಿಂದ 16 ಜನರನ್ನು ಮಂತ್ರಿ ಮಾಡಬೇಕಿದೆ. ಇಂಥ ಸಂದರ್ಭದಲ್ಲಿ ಸಮುದಾಯದವರು ‘ಮಂತ್ರಿ ಸ್ಥಾನ’ಕ್ಕೆ ಬೇಡಿಕೆ ಇಟ್ಟರೆ ಕಷ್ಟವಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

₹ 10 ಕೋಟಿ ಭರವಸೆ:ಮುಂದಿನ ಬಜೆಟ್‌ನಲ್ಲಿ ನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ₹ 10 ಕೋಟಿ ಮೀಸಲಿಡುತ್ತೇನೆ. ಈಗಾಗಲೇ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್‌ ಚಿಂಚನಸೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕೇಂದ್ರ ಸಚಿವ ಅರ್ಜುನ್‌ ಮುಂಡಾ ಜತೆ ಮಾತನಾಡಿ, ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.