ಹಾವೇರಿ ಗುತ್ತಲ ರಸ್ತೆಯ ಹಳೆರಿತ್ತಿ ಕ್ರಾಸ್ ಹತ್ತಿರ ಡ್ರ್ಯಾಗನ್ ಹಣ್ಣು ಮಾರಾಟ ಮಾಡುತ್ತಿರುವ ಕನವಳ್ಳಿ ಗ್ರಾಮದ ರೈತ ನಿಂಗಪ್ಪ ಸೊಟ್ಟಪ್ಪನವರ
ಗುತ್ತಲ: ಕಳೆದ ನಾಲ್ಕೈದು ವರ್ಷಗಳ ಹಿಂದೆ ಡ್ರ್ಯಾಗನ್ ಹಣ್ಣು ಬೆಳೆದು ಕೈ ತುಂಬಾ ಹಣ ಎಣಿಸುತ್ತಿದ್ದ ರೈತರು ಈಗ ಬೆಲೆ ಕುಸಿತದಿಂದ ಪರಿತಪಿಸುವಂತೆ ಆಗಿದೆ.
ಅಲ್ಲದೆ ಹೆಚ್ಚಿನ ರೈತರು ಬೆಳೆಯುತ್ತಿರುವುದರಿಂದ ಬೆಲೆ ಸಮರ, ಮಾರುಕಟ್ಟೆ ಕುಸಿತದಿಂದ ತೊಂದರೆಯಾಗಿದೆ. ಈ ಹಿಂದೆ ಹಣ್ಣಿಗೆ ಉತ್ತಮ ಬೆಲೆ ಇತ್ತು 1 ಕೆಜಿ ಹಣ್ಣಿಗೆ ₹ 150ರಿಂದ ₹ 200 ಮಾರಾಟವಾಗುತ್ತಿತ್ತು. ಈಗ ₹ 100ಗೆ ಕೆಜಿ ಕೇಳುವವರೂ ಇಲ್ಲವಾಗಿದೆ.
ಮಾರುಕಟ್ಟೆಯಲ್ಲಿ ಹಣ್ಣಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಇದ್ದರಿಂದ ರೈತರು ಲಕ್ಷ, ಲಕ್ಷ ಹಣ ಎಣಿಸಿದ್ದರು. ಡ್ರ್ಯಾಗನ್ ಪ್ರೂಟ್ಸ್ ಬೆಳೆದು ಆರ್ಥಿಕ ಸಂಕಷ್ಟದಿಂದ ಹೊರಬಂದು ಉತ್ತಮ ಆದಾಯ ಪಡೆಯಬಹುದು ಎಂಬ ಆಶಾಭಾವನೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಜನ ರೈತರು ಡ್ರ್ಯಾಗನ್ ಪ್ರೂಟ್ಸ್ ಬೆಳೆದು ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿ ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ ರೈತ ನಿಂಗಪ್ಪ ಸೊಟ್ಟಪ್ಪನವರ ಸಹ ಒಬ್ಬರು.
ಚಿತ್ರದುರ್ಗದಿಂದ ₹ 25ಕ್ಕೆ ಒಂದರಂತೆ ತಮ್ಮ 1 ಎಕರೆ 20 ಗುಂಟೆ ಪ್ರದೇಶದಲ್ಲಿ 750 ಸಸಿ ಹಾಕಿದ್ದಾರೆ. ಸಸಿಗೆ ಒಂದರಂತೆ ಆಶ್ರಯವಾಗಿ 750 ಸಿಮೆಂಟ್ ಕಂಬವನ್ನು ಹಾಕಲಾಗಿದೆ. 3 ವರ್ಷದ ಹಿಂದೆ ಬೆಳೆ ಹಾಕಲಾಗಿದ್ದು, ₹ 7 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಳೆದಿದ್ದಾರೆ.
‘ಬೆಳೆದ ಬೆಳೆ ಈಗ ಉತ್ತಮ ಇಳುವರಿ ಬರುತ್ತಿದ್ದು, ಹಣ್ಣಿಗೆ ಬೆಡಿಕೆ ಕಡಿಮೆಯಾಗಿದೆ. ಬೆಲೆ ಕುಸಿತದಿಂದ ಸಂಕಷ್ಟ ಎದುರಿಸಬೇಕಾಗಿದೆ. ಒಂದು ವರ್ಷದ ಹಿಂದೆ ಹಣ್ಣು ಕೆಜಿ ಒಂದಕ್ಕೆ ₹ 100 ರಿಂದ ₹150ಕ್ಕೆ ಮಾರಾಟ ಮಾಡಲಾಗಿದೆ. ಹಾವೇರಿ ಮತ್ತು ಮೋಟೆಬೆನ್ನೂರನ ದಲ್ಲಾಳಿಗಳು ಜಮೀನಿಗೆ ಬಂದು ಖರೀದಿ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ₹ 100ರ ಒಳಗೆ ಮಾರಾಟವಾಗುತ್ತಿವೆ’ ಎಂದು ರೈತ ನಿಂಗಪ್ಪ ವಿಷಾದದಿಂದ ಹೇಳಿದರು.
‘ಬೆಲೆ ಕುಸಿತ ಕಂಡ ಕಾರಣ ಹಣ್ಣನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ವರ್ಷಕ್ಕೆ ಖರ್ಚುವೆಚ್ಚವನ್ನು ತೆಗೆದು ₹ 40 ರಿಂದ ₹ 50 ಸಾವಿರ ಮಾತ್ರ ಲಾಭವಾಗುತ್ತದೆ. ಹಾಕಿದ ಖರ್ಚು ಬಾರದೇ ಸಾಲ ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ರೈತರಿಗೆ ಬಂದಿದೆ’ ಎಂದು ನಿಂಗಪ್ಪ ಹೇಳುತ್ತಾರೆ.
ಡ್ರ್ಯಾಗನ್ ಪ್ರೂಟ್ಸ್ ಬೆಳೆದು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಮತ್ತು ಹಣ್ಣಿಗೆ ಉತ್ತಮ ಬೆಲೆ ಸಿಗುವಂತೆ ಸರ್ಕಾರ ಬೆಲೆ ನಿಗದಿ ಮಾಡಬೇಕು ಎಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.