
ಹಾನಗಲ್: ಧರ್ಮಾ ಜಲಾಶಯದಿಂದ ಹಾನಗಲ್ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಶಾಶ್ವತ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ನಿತ್ಯ ಮತ್ತು ನಿರಂತರವಾಗಿ ನಲ್ಲಿ ನೀರು ಪಡೆಯಲು ಪಟ್ಟಣ ನಿವಾಸಿಗಳು ಇನ್ನೆಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ಎದುರಾಗಿದೆ.
ಸದ್ಯ ಇಲ್ಲಿನ ಬೃಹತ್ ಆನಿಕೆರೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇಸಿಗೆ ಆರಂಭದಲ್ಲಿ ಕೆರೆ ನೀರು ಖಾಲಿಯಾಗುವ ಕಾರಣಕ್ಕಾಗಿ ಧರ್ಮಾ ಜಲಾಶಯದಿಂದ ಕಾಲುವೆ ಮೂಲಕ ಆನಿಕೆರೆಗೆ ನೀರು ತುಂಬಿಸುವ ಯೋಜನೆ ಮೊದಲಿನಿಂದ ಚಾಲನೆಯಲ್ಲಿದೆ.
ಈಗ ಪಟ್ಟಣದ ಜನಸಂಖ್ಯೆ 35 ಸಾವಿರಕ್ಕೂ ಅಧಿಕವಿದೆ. ನಿತ್ಯ ಸುಮಾರ 45 ಲಕ್ಷ ಲೀಟರ್ ನೀರು ಬೇಕು. ಮುಂದಿನ 50 ಸಾವಿರ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈಗಿರುವ ನೀರು ಸರಬರಾಜಿನ ವ್ಯವಸ್ಥೆಗೆ ಸುಧಾರಣೆ ತರಲು ಮತ್ತು ಜಲಾಶಯದಿಂದ ನೀರು ಹರಿದು ಬರುವ ವೇಳೆ ನೀರು ಪೋಲಾಗವುದನ್ನು ತಪ್ಪಿಸಲು. ಮುಖ್ಯವಾಗಿ ನಿರಂತರವಾಗಿ ನೀರು ಪೂರೈಕೆಗಾಗಿ ರೂ 35 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡು ಎರಡು ವರ್ಷವಾಗುತ್ತಿದೆ.
ಅಮೃತ 2.0 ಯೋಜನೆ ಅಡಿಯಲ್ಲಿ 2023 ರಲ್ಲಿಯೇ ಕಾಮಗಾರಿಗೆ ಟೆಂಡರ್ ನಡೆದಿತ್ತು. ಈ ವರ್ಷದ ಫೆಬ್ರುವರಿಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿದ್ದರೂ, ಇನ್ನೂ ಶೇ.70 ರಷ್ಟು ಕಾಮಗಾರಿ ಬಾಕಿ ಇದೆ, 18 ಕಿಮಿ ಪೈಪ್ ಲೈನ್ ಆಗಬೇಕಾಗಿದೆ. ಆದರೆ 8 ಕಿಮಿ ಪೈಪ್‌ಲೈನ್ ಕೆಲಸ ಆಗಿಲ್ಲ,
ಧರ್ಮಾ ಜಲಾಶಯ ಆವರಣದಲ್ಲಿ ನಿರ್ಮಾಣವಾಗಬೇಕಿದ್ದ ಜಾಕ್ವೆಲ್ ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ಪಂಪ್‌ಹೌಸ್ ನಿರ್ಮಾಣ ಆಗಿಲ್ಲ. ಹಾನಗಲ್ ನೀರು ಶುದ್ಧೀಕರಣ ಘಟಕದಲ್ಲಿ 15 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹ ಕಾಮಗಾರಿ ಅಡಿಪಾಯದ ಹಂತದಲ್ಲಿ ಸ್ಥಗಿತವಾಗಿದೆ. ವಿದ್ಯುತ್ ಸಂಪರ್ಕದ ಯಾವುದೇ ಕಾಮಗಾರಿ ಇನ್ನೂ ಆರಂಭ ಆಗದೇ ಪರವಾನಿಗೆ ಹಂತದಲ್ಲಿದೆ.
ಇದೇ ಯೋಜನೆಗೆ ಹೊಂದಿಕೊಂಡ ಪಟ್ಟಣದಲ್ಲಿ 120 ಕಿಮಿ ಪೈಪ್‌ಲೈನ್ ಹಾಕಿ ಎಲ್ಲ ಮನೆಗಳಿಗೆ ನಿತ್ಯ ನಿರಂತರ ನೀರು ಪೂರೈಸುವ ಯೋಜನೆಗೆ ಹೊಸ ಮಂಜೂರಾತಿಯೂ ಬೇಕಾಗಿದೆ. ಈಗ ಮಂಜೂರಾದ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಮುಂದಿನ ಯೋಜನೆ ಮಂಜೂರಿ ಸಾಧ್ಯ ಎನ್ನಲಾಗಿದೆ.
’ನಿರೀಕ್ಷಿತ ವೇಗದಲ್ಲಿ ಕಾಮಗಾರಿ ಆಗಿಲ್ಲ. ಯೋಜನೆಯ ಫಲ ವಿಳಂಬಕ್ಕೆ ದಾರಿಯಾಗಿದೆ. ಈ ಬೇಸಿಗೆಯಲ್ಲಿ ಆನಿಕೆರೆ ನೀರು ಕಡಿಮೆಯಾದರೆ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವುದು ಕಷ್ಟ’ ಎಂದು ಪುರಸಭೆ ಎಂಜನಿಯರ್ ನಾಗರಾಜ ಮಿರ್ಜಿ ತಿಳಿಸಿದ್ದಾರೆ.
ಈ ಯೋಜನೆಯ ಕಾಮಗಾರಿಗೆ ಲೋಕೋಪಯೋಗಿ, ನೀರಾವರಿ ಇಲಾಖೆಗಳಿಂದ ಸಕಾಲಿಕ ಸಹಕಾರ ಅತ್ಯಗತ್ಯ. ಕಾಮಗಾರಿಗೆ ಬೇಕಾದ ಎಲ್ಲ ಸಾಮಗ್ರಿ ಸಿದ್ಧವಿದೆ. ಎಲ್ಲ ಅಡಚಣೆಗಳನ್ನು ನಿವಾರಿಸಿಕೊಂಡು ಇನ್ನು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡು ಪಟ್ಟಣಕ್ಕೆ ನೀರು ಒದಗಿಸುವ ಭರವಸೆ ಇಟ್ಟುಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.