ADVERTISEMENT

ಹಾವೇರಿ: ನೀರಿನ ಘಟಕ ಬಂದ್, ಆಕ್ರೋಶ

ತಾ.ಪಂ. ಸಾಮಾನ್ಯ ಸಭೆ: ನಿರ್ವಹಣಾ ವೆಚ್ಚ ತಡೆಹಿಡಿಯಲು ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:49 IST
Last Updated 6 ಜುಲೈ 2020, 16:49 IST
ಹಾವೇರಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸತೀಶ ಸಂದಿಮನಿ ಮಾತನಾಡಿದರು 
ಹಾವೇರಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸತೀಶ ಸಂದಿಮನಿ ಮಾತನಾಡಿದರು    

ಹಾವೇರಿ:ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಜನರು ಪರದಾಡುತ್ತಿದ್ದಾರೆ. ಹಾಗಾಗಿ ಖಾಸಗಿ ಏಜೆನ್ಸಿಯವರಿಗೆ ಕೊಡಬೇಕಾದ ನಿರ್ವಹಣಾ ವೆಚ್ಚವನ್ನು ತಡೆಹಿಡಿಯಿರಿ ಎಂದು ಸದಸ್ಯರು ಆಗ್ರಹಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕಮಲವ್ವ ಹೇಮನಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಬಸಾಪುರ,ಮೇವುಂಡಿ, ತೆರೆದಹಳ್ಳಿ, ಕನವಳ್ಳಿ, ಕುರುಗುಂದ, ಕೆರೆಮತ್ತಿಹಳ್ಳಿ, ದೇವಗಿರಿ ಮುಂತಾದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ, ಜನರ ಪಾಲಿಗೆ ಇಲ್ಲದಂತಾಗಿವೆ. ಮೂರ್ನಾಲ್ಕು ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಖಾಸಗಿ ಏಜೆನ್ಸಿಯವರು ಕಾಲಹರಣ ಮಾಡುತ್ತಿದ್ದಾರೆ ಎಂದು ಸದಸ್ಯ ಮಾಲತೇಶ ಬನ್ನಿಮಟ್ಟಿ ಆರೋಪಿಸಿದರು.

ADVERTISEMENT

ನಾಮಫಲಕ ಹಾಕಿ:‌ನೀರಿನ ಘಟಕಗಳ ಮುಂಭಾಗ ನಿರ್ವಹಣೆ ಮಾಡುವ ಏಜೆನ್ಸಿ ಹೆಸರು ಮತ್ತು ಮೊಬೈಲ್‌ ಸಂಖ್ಯೆ ಇರುವ ನಾಮಫಲಕ ಹಾಕಬೇಕು. ಇದರಿಂದ ಜನರು ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತದೆ.ಕುಗ್ರಾಮಗಳಿಂದ ಜನರು ಮಾಡಿದ ಕರೆಗೆ ಪ್ರಧಾನಿ ಕಾರ್ಯಾಲಯದ ಸಿಬ್ಬಂದಿ ಸ್ಪಂದಿಸಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ಇರುವ ಅಧಿಕಾರಿಗಳು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದುಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿ ಮತ್ತು ಖಾಸಗಿ ಏಜೆನ್ಸಿ ಸಿಬ್ಬಂದಿ ವಿರುದ್ಧ ಸದಸ್ಯರಾದಸತೀಶ ಸಂದಿಮನಿ, ಸಾವಿತ್ರಮ್ಮ ಕುರುವರ ಹರಿಹಾಯ್ದರು.

ಸಹಕಾರ ಸಂಘಗಳು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ, ಅವರು ನಿರ್ವಹಿಸುತ್ತಿರುವ ಎಲ್ಲ ನೀರಿನ ಘಟಕಗಳನ್ನು ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಬೇಕು. ಈ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಕಾರ್ಯನಿರ್ವಹಣಾಧಿಕಾರಿ ಡಾ.ಬಸವರಾಜ ಚಲವಾದಿ ಹೇಳಿದರು.

29 ಗ್ರಾಮಗಳಲ್ಲಿ ಸರ್ಕಾರಿ ಜಾಗ ಸಿಕ್ಕಿದ್ದು, ನಿವೇಶನರಹಿತರ ಪಟ್ಟಿ ತಯಾರಿಸಿ, ಆಡಳಿತಾಧಿಕಾರಿಗಳ ಸಹಕಾರದೊಂದಿಗೆ ಅರ್ಹ ಫಲಾನುಭವಿಗಳಿಗೆ ಪಟ್ಟಾ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಬೆಡ್‌ಗೆ ಸಿದ್ಧತೆ:ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರು ಮಾತನಾಡಿ, ‘ಮೇ 27ರಿಂದ ಇದುವರೆಗೆ ಹಾವೇರಿ ತಾಲ್ಲೂಕಿನಲ್ಲಿ 20 ಕೋವಿಡ್‌ ಪ್ರಕರಣಗಳು ಕಂಡು ಬಂದಿವೆ. 3 ಮಂದಿ ಹೊರಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, ಉಳಿದ 17 ಮಂದಿ ಜಿಲ್ಲಾಸ್ಪತ್ರೆ ಆವರಣದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 75 ಬೆಡ್‌ಗಳು ಲಭ್ಯವಿದ್ದು, ಹಿರೇಕೆರೂರು ಮತ್ತು ಸವಣೂರು ಆಸ್ಪತ್ರೆಗಳಲ್ಲೂ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್‌ ಕೇರ್‌ ಸೆಂಟರ್‌ ತೆರೆದು ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಸುವರ್ಣಾ ಬ.ಸುಕಳಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ಗೋಟನವರ ಮತ್ತು ಸದಸ್ಯರು, ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.