ADVERTISEMENT

ಹಾವೇರಿ | ‘ಮಾದಕ ವ್ಯಸನ: ಕಠಿಣ ಕ್ರಮ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:48 IST
Last Updated 25 ಜುಲೈ 2025, 2:48 IST
ಹಾವೇರಿಯ ಜಿ.ಎಚ್‌. ಕಾಲೇಜಿನ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ: ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ಹಾವೇರಿಯ ಜಿ.ಎಚ್‌. ಕಾಲೇಜಿನ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ: ಅಭಿಯಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು   

ಹಾವೇರಿ: ‘ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಯುವಸಮೂಹವನ್ನು ಕಾಪಾಡಲು ನಾವೆಲ್ಲರೂ ಡ್ರಗ್ಸ್ ವಿರುದ್ಧ ಹೋರಾಡಬೇಕಿದೆ’ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ನಗರದ ಕೆಎಲ್‌ಇ ಜಿ.ಎಚ್‌. ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರ ಹಿತರಕ್ಷಣಾ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ: ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಹಲವು ವಿದ್ಯಾರ್ಥಿಗಳು ಗಾಂಜಾ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪೊಲೀಸರು, ಗಾಂಜಾ ಜಪ್ತಿ ಮಾಡಿದಾಗ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಆರೋಪಿಗಳು, ಪದೇ ಪದೇ ಗಾಂಜಾ ಮಾರುತ್ತಿದ್ದಾರೆ. ಇಂಥವರಿಂದ ಯುವಸಮೂಹ ದಾರಿ ತಪ್ಪುತ್ತಿದೆ’ ಎಂದು ಹೇಳಿದರು.

ADVERTISEMENT

‘ಯುವಸಮೂಹದ ಹಿತ ದೃಷ್ಟಿಯಿಂದ ಪೊಲೀಸರು, ಗಾಂಜಾ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಕೃತ್ಯದ ಆಳಕ್ಕೆ ತನಿಖೆ ನಡೆಸಿ, ಬುಡಸಮೇತ ಡ್ರಗ್ಸ್ ಜಾಲವನ್ನು ಕಿತ್ತು ಹಾಕಬೇಕು. ವಿದ್ಯಾರ್ಥಿಗಳು ಸಹ ಡ್ರಗ್ಸ್ ವಿರುದ್ಧ ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಎಸ್‌ಪಿ ಯಶೋದಾ ವಂಟಗೋಡಿ ಮಾತನಾಡಿ, ‘ಇಂದಿನ ಯುವಜನತೆ, ಸಹವಾಸ ದೋಷದಿಂದ ಡ್ರಗ್ಸ್ ವ್ಯಸನ ಆರಂಭಿಸುತ್ತಿದ್ದಾರೆ. ಈ ವ್ಯಸನದಿಂದ ಕ್ರಮೇಣ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಇಂದಿನ ಯುವಜನತೆ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕು. ಭವಿಷ್ಯಕ್ಕೆ ಕುತ್ತು ತರುವ ಹಾಗೂ ಜೀವನಕ್ಕೆ ತಡೆ ಉಂಟುಮಾಡುವ ವಿಷಯಗಳಿಂದ ಅಂತರ ಕಾಯ್ದುಕೊಳ್ಳಬೇಕು. ಅಧ್ಯಯನದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ನಾಗರಿಕರಾಗಬೇಕು’ ಎಂದು ಹೇಳಿದರು.

ಬಳಿಗಾರ ಮಾನಸಿಕ ಆರೋಗ್ಯ ಆಸ್ಪತ್ರೆಯ ಆಪ್ತ ಸಮಾಲೋಚಕ ಡಾ. ಉಮಾ ಬಳಿಗಾರ, ಸಂತೋಷ ಆಲದಕಟ್ಟಿ, ಪ್ರಾಂಶುಪಾಲ ಜ್ಯೋತಿಬಾ ಸಿಂಧೆ, ಹೆಚ್ಚುವರಿ ಎಸ್‌.ಪಿ. ಎಲ್.ವೈ. ಶಿರಕೋಳ, ಇನ್‌ಸ್ಪೆಕ್ಟರ್ ಶಿವಶಂಕರ್ ಗಣಾಚಾರಿ, ಪ್ರಾಂಶುಪಾಲ ಎಂ.ವಿ. ಹೊಳಿಯವರ, ವಿನಯಕುಮಾರ್ ತಹಶೀಲ್ದಾರ್, ಅಮಿತಗೌಡ ಪಾಟೀಲ, ಪ್ರವೀಣಕುಮಾರ್ ಅಂಗರಗಟ್ಟಿ, ನಾಗರಾಜ್ ಬ್ಯಾಡಗಿ, ಜಗದೀಶ್ ಮಲಗೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.