ಬ್ಯಾಡಗಿ: ‘ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ವ್ಯಸನ ಮುಕ್ತ ಸಮಾಜ ನಿರ್ಮಾಣ ಅವಶ್ಯವಿದೆ’ ಎಂದು ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಪಟ್ಟಣದ ಎಸ್‌ಜೆಜೆಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ‘ಖಿನ್ನತೆಯಿಂದ ವ್ಯಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಯುವಕರು ದುಶ್ಚಟಗಳಿಂದ ದೂರವಿರಬೇಕು’ ಎಂದರು.
ಆನಂದ ಮೇದಾರ, ಡಾ. ಸಂತೋಷ ಹಾಲುಂಡಿ, ಶಿಕ್ಷಕ ವೈ.ಟಿ. ಹೆಬ್ಬಳ್ಳಿ ಮತ್ತು ಹಿರಿಯ ಆರೋಗ್ಯ ಸಹಾಯಕ ಪ್ರಧಾಂತ ಎಂ.ಎನ್. ಅವರು ಜನಸಂಖ್ಯಾ ನಿಯಂತ್ರಣ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೊಳ, ಪ್ರಾಚಾರ್ಯ ಎಂ.ಎಫ್. ಬಂಡೆಪ್ಪನವರ, ಉಪನ್ಯಾಸಕರಾದ ಡಿ.ಬಿ. ಕುಸುಗೂರ, ಕರಬಸಪ್ಪ ಹಡಪದ, ಸುರೇಶ ದೊಡ್ಮನಿ, ಆರೋಗ್ಯ ಶಿಕ್ಷಣಾಧಿಕಾರಿ ಮಮತಾ ವಿ., ಎಸ್.ಎಂ.ಅಗಡಿ, ಸದಾನಂದ ಚಿಕ್ಕಮಠ, ಎಂ.ಎಫ್. ಕಬ್ಬಾರ ಇದ್ದರು.
ಇದಕ್ಕೂ ಮೊದಲು ಕಾಲೇಜು ಆವರಣದಿಂದ ನೆಹರೂ ವೃತ್ತದವರೆಗೆ ಜಾಥಾ ಸಾಗಿತು. ದಾರಿಯುದ್ದಕ್ಕೂ ಘೋಷಣೆ ಕೂಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಜನಸಂಖ್ಯಾ ನಿಯಂತ್ರಣಕ್ಕೆ ಸಲಹೆ:
‘ಭಾರತದಲ್ಲಿ ಪ್ರತಿ ವರ್ಷ 2.44 ಕೋಟಿ ಮಕ್ಕಳು ಜನಿಸುತ್ತಿದ್ದು ಜನಸಂಖ್ಯಾ ನಿಯಂತ್ರಣ ಅಗತ್ಯವಾಗಿದೆ. ಜನಸಂಖ್ಯೆ ಹೆಚ್ಚಿದರೆ ಆಹಾರ ನೀರು ಸೇರಿದಂತೆ ಸೌಕರ್ಯಕ್ಕೆ ಬೇಡಿಕೆ ಹೆಚ್ಚಾಗಿ ಬಡತನ ಉಲ್ಬಣವಾಗಲಿದೆ. ಶಿಕ್ಷಣ ಆರೋಗ್ಯ ಸಂಪನ್ಮೂಲಗಳ ಕೊತೆಯಾಗಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಕಾಂತೇಶ ಭಜಂತ್ರಿ ತಿಳಿಸಿದರು. ‘ಗಂಡುಮಕ್ಕಳು 21 ಹಾಗೂ ಹೆಣ್ಣುಮಕ್ಕಳು 18 ವರ್ಷ ತುಂಬಿದ ಬಳಿಕ ಮದುವೆಯಾಗಬೇಕು. ಮೂರು ವರ್ಷದ ಬಳಿಕ ಮೊದಲ ಮಗು ಪಡೆಯಬೇಕು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.