ADVERTISEMENT

ಹಾವೇರಿ ಜಿ.ಪಂ. ಅಧ್ಯಕ್ಷರಾಗಿ ಏಕನಾಥ ಬಾನುವಳ್ಳಿ ಅವಿರೋಧ ಆಯ್ಕೆ

ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆ: ಬಸವನಗೌಡ ದೇಸಾಯಿ ನಿಧನದಿಂದ ತೆರವಾಗಿದ್ದ ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:19 IST
Last Updated 22 ಅಕ್ಟೋಬರ್ 2020, 13:19 IST
ಹಾವೇರಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಏಕನಾಥ ಬಾನುವಳ್ಳಿ ಅವರನ್ನು ಸದಸ್ಯರು ಅಭಿನಂದಿಸಿದರು 
ಹಾವೇರಿ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಏಕನಾಥ ಬಾನುವಳ್ಳಿ ಅವರನ್ನು ಸದಸ್ಯರು ಅಭಿನಂದಿಸಿದರು    

ಹಾವೇರಿ: ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಏಕನಾಥ ಬಾನುವಳ್ಳಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಐದು ವರ್ಷ ಅವಧಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆಯ ಉಳಿದ ಅವಧಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಏಕನಾಥ ಬಾನುವಳ್ಳಿ ಅವರು ಮಾತ್ರ ನಾಮನಿರ್ದೇಶನಗೊಂಡರು. ಹೀಗಾಗಿ ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರು, ನಿಯಮಾನುಸಾರ ಏಕನಾಥ ಬಾನುವಳ್ಳಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಉಪಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರು ಬೆಳಿಗ್ಗೆ 11ರಿಂದ 1 ಗಂಟೆಯವರೆಗೆ ಚುನಾವಣೆ ಪ್ರಕ್ರಿಯೆ ನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಾರಡಗಿ ರಮೇಶ ಬಸಪ್ಪ ದುಗ್ಗತ್ತಿ, ಅಗಡಿ ಕ್ಷೇತ್ರದ ಕೊಟ್ರೇಶಪ್ಪ ಬಸೆಗಣ್ಣಿ, ಮಾಸೂರ ಕ್ಷೇತ್ರದ ಎಸ್.ಕೆ ಕರಿಯಣ್ಣನವರ, ಕಾಗಿನೆಲೆ ಕ್ಷೇತ್ರದ ಅಬ್ದುಲ್ ಮುನಾಫ್ ಬಾಬುಲಿಸಾಬ್ ಎಲಿಗಾರ ಅವರು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾಕೋಳ ಕ್ಷೇತ್ರದ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವರನ್ನು ಸೂಚಿಸಿ ನಾಮನಿರ್ದೇಶನ ಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.

ADVERTISEMENT

34 ಸದಸ್ಯರ ಬಲದ ಹಾವೇರಿ ಜಿಲ್ಲಾ ಪಂಚಾಯಿತಿಯಲ್ಲಿ ಒಬ್ಬ ಸದಸ್ಯ ನಿಧನ ಹೊಂದಿದ ಕಾರಣ ಆಯ್ಕೆಗಾಗಿ 17 ಸದಸ್ಯರ ಕೋರಂ ಅವಶ್ಯವಿದ್ದು 23 ಸದಸ್ಯರು ಚುನಾವಣಾ ಸಭೆಯಲ್ಲಿ ಭಾಗವಹಿಸಿದ್ದರು. ಒಬ್ಬರೇ ನಾಮನಿರ್ದೇಶನ ಸೂಚಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ಬಸವನಗೌಡ ದೇಸಾಯಿ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಸಲಾಯಿತು.

ನೂತನ ಅಧ್ಯಕ್ಷರ ಪರಿಚಯ:ನೂತನ ಅಧ್ಯಕ್ಷರಾಗಿ ಆಯ್ಕೆ ಹೊಂದಿರುವ ಏಕನಾಥ ಭೀಮರೆಡ್ಡಿ ಬಾನುವಳ್ಳಿ ಅವರು ಕಾಕೋಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಬಿ.ಎ ಪದವೀಧರರಾದ ಇವರು ಕೃಷಿ ವೃತ್ತಿಯಲ್ಲಿ ತೊಡಗಿದ್ದು, ರಾಣೆಬೆನ್ನೂರ ತಾಲ್ಲೂಕಿನ ಗುಡಗೂರಿನಲ್ಲಿ ವಾಸವಾಗಿದ್ದಾರೆ. 1982ರಿಂದ 1987ರಲ್ಲಿ ರಾಣೆಬೆನ್ನೂರು ತಾಲ್ಲೂಕು ಹೊನ್ನತ್ತಿ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿ 1992ರವರೆಗೆ ಕಾರ್ಯನಿರ್ವಹಿಸಿದ್ದಾರೆ.

1995ರ ಚುನಾವಣೆಯಲ್ಲಿ ಗುಡಗೂರ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡು 2000 ಇಸವಿಯವರೆಗೆ ಕಾರ್ಯನಿರ್ವಹಿದ್ದಾರೆ. 2000ರಿಂದ 2005ರವರೆಗೆ ರಾಣೆಬೆನ್ನೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಸದಸ್ಯರು ಹಾಗೂ ಅಧ್ಯಕ್ಷರಾಗಿ ಹಾಗೂ 2005ರಿಂದ 2011ರವರೆಗೆ ರಾಣೆಬೆನ್ನೂರ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಅಧ್ಯಕ್ಷರಾಗಿ ಹಾಗೂ 2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರಾಣೆಬೆನ್ನೂರು ತಾಲ್ಲೂಕು ಕಾಕೋಳ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.