ADVERTISEMENT

ಹಾವೇರಿ| ವೃದ್ಧ ದಂಪತಿ ಕೈ–ಕಾಲು ಕಟ್ಟಿ ದರೋಡೆ: ಐವರು ಆರೋಪಿಗಳ ತಂಡದಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:26 IST
Last Updated 15 ನವೆಂಬರ್ 2025, 4:26 IST
   

ಹಾವೇರಿ: ಇಲ್ಲಿಯ ಇಜಾರಿಲಕಮಾಪುರ ಬಳಿಯ ಐ.ಡಿ.ಎಸ್.ಎಂ.ಟಿ ಕಾಲೊನಿಯ ಮನೆಯಲ್ಲಿದ್ದ ವೃದ್ಧ ದಂಪತಿಯ ಕೈ–ಕಾಲು ಕಟ್ಟಿಹಾಕಿ ದರೋಡೆ ಮಾಡಲಾಗಿದ್ದು, ಈ ಬಗ್ಗೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಳೇ ಪಿ.ಬಿ. ರಸ್ತೆಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಪೊ ಹಿಂಭಾಗದಲ್ಲಿ ನವೆಂಬರ್ 12ರಂದು ದರೋಡೆ ನಡೆದಿದೆ. ಈ ಬಗ್ಗೆ ಮನೆ ಮಾಲೀಕರಾದ ವೃದ್ಧ ಶಾಮಣ್ಣಗೌಡ ಅವರು ದೂರು ನೀಡಿದ್ದಾರೆ. ಐವರು ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ 50 ಮೀಟರ್‌ ದೂರದಲ್ಲಿರುವ ಐ.ಡಿ.ಎಸ್.ಎಂ.ಟಿ ಕಾಲೊನಿಯಲ್ಲಿ ದೂರುದಾರರ ಮನೆಯಿದೆ. ಇವರ ಅಕ್ಕ–ಪಕ್ಕದಲ್ಲಿ ಯಾವುದೇ ಮನೆಗಳಿಲ್ಲ. ಈ ಬಗ್ಗೆ ತಿಳಿದುಕೊಂಡೇ ಆರೋಪಿಗಳು ಕೃತ್ಯ ಎಸಗಿರುವ ಅನುಮಾನವಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

ಕೂಡುಗೋಲು ಹಿಡಿದು ಕೊಲೆ ಬೆದರಿಕೆ: ‘ನ. 12ರಂದು ಸಂಜೆ ಮನೆಯ ಬಾಗಿಲು ಹಾಕಿರಲಿಲ್ಲ. ಪತ್ನಿ ಹಾಗೂ ನಾನು ಮನೆಯಲ್ಲಿದ್ದೆವು. ಮುಖ್ಯ ಬಾಗಿಲು ಮೂಲಕ ಒಳಗೆ ನುಗ್ಗಿದ್ದ ಐವರು, ಕೈಯಲ್ಲಿ ಕೂಡುಗೋಲು ಹಿಡಿದಿದ್ದರು. ಅಲ್ಪಸ್ವಲ್ಪ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು’ ಎಂದು ದೂರುದಾರ ವೃದ್ಧ ತಿಳಿಸಿದ್ದಾರೆ.

‘ಮನೆಯೊಳಗೆ ಬಂದಿದ್ದ ದರೋಡೆಕೋರರು, ಕಿಟಕಿಗೆ ಹಾಕಿದ್ದ ಪರದೆಯ ದಾರವನ್ನು ಕುಡುಗೋಲಿನಿಂದ ಕತ್ತರಿಸಿದ್ದರು. ಅದೇ ದಾರದಿಂದ ನನ್ನ ಹಾಗೂ ಪತ್ನಿಯ ಕೈ–ಕಾಲುಗಳನ್ನು ಕಟ್ಟಿಹಾಕಿದ್ದರು. ಟೇಬಲ್‌ ಮೇಲಿದ್ದ ಬಟ್ಟೆಯನ್ನು ಹರಿದು, ಅದನ್ನು ಇಬ್ಬರ ಬಾಯಿಗೆ ಕಟ್ಟಿದ್ದರು. ಹೀಗಾಗಿ, ಕೂಗಾಡಲು ಆಗಿರಲಿಲ್ಲ. ಕುತ್ತಿಗೆ ಬಳಿ ಕುಡುಗೋಲು ಹಿಡಿದಿದ್ದ ಆರೋಪಿಗಳು, ಚೀರಾಡಿದರೆ ಕುತ್ತಿಗೆ ಕೊಯ್ಯುವುದಾಗಿ ಬೆದರಿಸಿದ್ದರು.’

‘ಪತ್ನಿಯ ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆ ಬಿಚ್ಚಿಕೊಂಡಿದ್ದರು. ಐವರ ಪೈಕಿ ಇಬ್ಬರು, ಮಲಗುವ ಕೊಠಡಿಗೆ ಹೋಗಿ ಅಲ್ಲಿಯ ಟ್ರಿಜುರಿಯ ಬಾಗಿಲನ್ನು ಆಯುಧದಿಂದ ಮೀಟಿ ತೆಗೆದಿದ್ದರು. ನಂತರ, ಬಟ್ಟೆಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದರು. ಟ್ರಿಜುರಿಯಲ್ಲಿದ್ದ ₹ 4,000 ನಗದು ಪಡೆದಿದ್ದರು. ನಂತರ, ದೇವರ ಕೊಠಡಿಯಲ್ಲಿದ್ದ 100 ಗ್ರಾ ಬೆಳ್ಳಿಯ ವಸ್ತುಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ವೃದ್ಧ ಹೇಳಿದ್ದಾರೆ.

ಇದೇ ದೂರು ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ದಿನದಂದು ಯಾರೆಲ್ಲ ಮನೆಗೆ ಬಂದಿದ್ದರು ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದೂರಿನಲ್ಲಿರುವ ಕೆಲ ಅಂಶಗಳ ಬಗ್ಗೆ ಗೊಂದಲವಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.