ADVERTISEMENT

ಅಪಘಾತದ ಹಣ ಕೊಡದೇ ವೃದ್ಧೆಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 9:26 IST
Last Updated 31 ಜನವರಿ 2026, 9:26 IST
   

ಹಾವೇರಿ: ‘ಅಪಘಾತದ ಪರಿಹಾರವಾಗಿ ಬಂದಿದ್ದ ಹಣವನ್ನು ಪಡೆದುಕೊಂಡಿದ್ದ ಮಂಜಪ್ಪ ಹಾಗೂ ಗಂಗಾಧರ ಎಂಬುವವರು, ಹಣ ವಾಪಸು ಕೇಳಿದ್ದಕ್ಕೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿ ವೃದ್ಧೆ ಸಿದ್ದಮ್ಮ ಎಂಬುವವರು ಕುಮಾರಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

‘ರಾಣೆಬೆನ್ನೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ 65 ವರ್ಷದ ವೃದ್ಧೆ ಸಿದ್ದಮ್ಮ ಅವರು ದೂರು ನೀಡಿದ್ದಾರೆ. ಮಾಕನೂರು ಗ್ರಾಮದ ಮಂಜಪ್ಪ ಅಲಿಯಾಸ್ ಗುತ್ತೆಪ್ಪ ಹನುಮಂತಪ್ಪ ಬಾರ್ಕಿ ಹಾಗೂ ಗಂಗಾಧರ ಲೋಹಿತಪ್ಪ ಸಾರಥಿ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ದೂರುದಾರರಾದ ಸಿದ್ದಮ್ಮ ಅವರಿಗೆ 18 ವರ್ಷಗಳ ಹಿಂದೆ ಅಪಘಾತವಾಗಿತ್ತು. ಅಪಘಾತ ಮಾಡಿದ್ದ ವಾಹನದ ಮಾಲೀಕ, ಪರಿಹಾರವಾಗಿ ₹75 ಸಾವಿರ ನೀಡಿದ್ದ. ಅದು ಮಾಕನೂರು ಗ್ರಾಮದ ಯೂನಿಯನ್ ಬ್ಯಾಂಕ್‌ನ ಖಾತೆಗೆ ಜಮೆ ಆಗಿತ್ತು. ಹಣ ನೀಡಲು ಸತಾಯಿಸಿದ್ದ ಬ್ಯಾಂಕ್‌ನವರು, ‘ನಿಮ್ಮ ಹೊಲದ ಮೇಲೆ ಸಾಲವಿದೆ. ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತೇವೆ’ ಎಂದಿದ್ದರು. ಅವಾಗಲೇ ಸಹಾಯಕ್ಕೆ ಬಂದಿದ್ದ ಆರೋಪಿಗಳು, ವೃದ್ಧೆಯ ಖಾತೆಗೆ ಎಟಿಎಂ ಕಾರ್ಡ್‌ ಮಾಡಿಸಿದ್ದರು’ ಎಂದರು.

ADVERTISEMENT

‘ಎಟಿಎಂ ಕಾರ್ಡ್ ಬಳಸಿದ್ದ ಆರೋಪಿಗಳು, ಒಂದು ಬಾರಿ ₹ 25,000 ಹಾಗೂ ಮರುದಿನ ₹ 50,000 ಡ್ರಾ ಮಾಡಿಕೊಂಡಿದ್ದರು. ಹಣವನ್ನು ಕೆಲದಿನ ತಮ್ಮ ಬಳಿಯೇ ಇಟ್ಟುಕೊಳ್ಳುವುದಾಗಿ ಆರೋಪಿಗಳು ಹೇಳಿದ್ದರು. ಅದನ್ನು ವೃದ್ಧೆ ನಂಬಿದ್ದರು. ನಾಲ್ಕು ತಿಂಗಳು ಬಿಟ್ಟು ಹೋಗಿ ಕೇಳಿದಾಗ, ‘ಹಣ ಬಳಸಿಕೊಂಡಿದ್ದೇವೆ. ಸ್ವಲ್ಪ ದಿನ ಬಿಟ್ಟು ಕೊಡುತ್ತೇವೆ’ ಎಂದು ಪುನಃ ಹೇಳಿದ್ದರು. ಬೇಸತ್ತ ವೃದ್ಧೆ, ಹಣ ವಾಪಸು ಕೊಡಿಸುವುಂತೆ ಠಾಣೆಗೆ ಅರ್ಜಿ ನೀಡಿದ್ದರು. ಆರೋಪಿಗಳನ್ನು ಠಾಣೆಗೆ ಕರೆಸಿ, ಹಣ ವಾಪಸು ನೀಡಲು ಡಿಸೆಂಬರ್ ಗಡುವು ನೀಡಲಾಗಿತ್ತು. ನಿಗದಿತ ಸಮಯಕ್ಕೆ ವೃದ್ಧೆ ಹಣ ಕೇಳಲು ಹೋದಾಗ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಜಾತಿ ನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.