ಹಾನಗಲ್: ತಾಲ್ಲೂಕಿನ ಇನಾಂನೀರಲಗಿ ಗ್ರಾಮದ ಯುವಕ ವಿದ್ಯುತ್ ಹರಿದು ಸಾವನ್ನಪ್ಪಿರುವ ಘಟನೆಯ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಗಣೇಶ ಹಬ್ಬದ ಪ್ರಯುಕ್ತ ಆಗಸ್ಟ್ 27ರಂದು ತಳೀರು ತೋರಣ ತರಲು ಹೊಲಕ್ಕೆ ಹೋಗಿದ್ದ ಗ್ರಾಮದ ಅಣ್ಣಪ್ಪ ಪಡವೇಶಪ್ಪ ಕ್ಯಾಸನೂರ ಎಂಬ ಯುವಕ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿ ಮೃತಪಟ್ಟಿದ್ದರು.
ಈ ಘಟನೆಯ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಚಲವಾದಿ ಮಹಾಸಭಾ ಮತ್ತು ವಿವಿಧ ಪರಿಶಿಷ್ಟ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
‘ಬೆಳೆಗಳ ರಕ್ಷಣೆಗಾಗಿ ಈ ಭಾಗದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ವಿದ್ಯುತ್ ತಂತಿ ಅಳವಡಿಸಿರುವುದು ಈ ದುರ್ಘಟನೆಗೆ ಕಾರಣವಾಗಿದೆ. ವಿದ್ಯುತ್ ತಂತಿಗಳ ವ್ಯವಸ್ಥೆಯಿಂದ ಈ ಹಿಂದೆಯೂ ಹಲವಾರು ಬಾರಿ ಪ್ರಾಣಿ, ಪಕ್ಷಿಗಳಿಗೆ ಇದೇ ಸ್ಥಳದಲ್ಲಿ ಸಾವು ಬಂದಿದೆ’.
‘ಈ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ನಡೆದರೆ, ವಿವಿಧ ಸಂಘಟನೆಗಳಿಂದ ಹಾನಗಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತದೆ. ಘಟನೆಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಮತ್ತು ಹೆಸ್ಕಾಂ ಅಧಿಕಾರಿಗಳು ಆಗಮಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಾ ನಿರತರ ನಡುವೆ ವಾಗ್ವಾದ ನಡೆದವು.
ಮಹೇಶ ಕ್ಯಾಸನೂರ, ಮಂಜುನಾಥ ಬಿ, ಮಲ್ಲೇಶಪ್ಪ ಮಡ್ಲೇರ, ಮಂಜುನಾಥ ಕರ್ಜಗಿ, ರಾಮಣ್ಣ ಯಳ್ಳೂರ, ರಾಮನಗೌಡ ಪಾಟೀಲ, ಸತೀಶ ಕಾಟನಹಳ್ಳಿ, ಹನುಮಂತಪ್ಪ ಕೊಣನಕೊಪ್ಪ, ಬಸವರಾಜ ಚಲವಾದಿ, ಮಂಜು ಯಳ್ಳೂರ, ನಿಂಗಪ್ಪ ಕಾಳೇರ, ಮೋಹನ ಕ್ಯಾಸನೂರ, ಲಕ್ಷ್ಮಣ ಬಾರ್ಕಿ, ಈರಣ್ಣ ಚಲವಾದಿ, ಮಾರುತಿ ಚನ್ನದಾಸರ, ಲೋಕೇಶ ಲಕ್ಷ್ಮೀಪೂರ, ಫಕ್ಕೀರೇಶ ಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.