ADVERTISEMENT

’ನೆರೆ’ ಅವ್ಯವಹಾರ: 11 ಮಂದಿ ಬಂಧನ

ಮನೆ ಹಾನಿ ಪರಿಹಾರ ವಿತರಣೆ: ಪರಿಶೀಲನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 15:50 IST
Last Updated 18 ಮಾರ್ಚ್ 2020, 15:50 IST
ಕೃಷ್ಣ ಬಾಜಪೇಯಿ 
ಕೃಷ್ಣ ಬಾಜಪೇಯಿ    

ಹಾವೇರಿ: ‘ಅತಿವೃಷ್ಟಿ ಮತ್ತು ನೆರೆಯಿಂದ ಹಾನಿಯಾದ ಬೆಳೆ ಪರಿಹಾರ ವಿತರಣೆಯ ಅವ್ಯವಹಾರ ಕುರಿತಂತೆ ಪೊಲೀಸ್ ತನಿಖೆ ಮುಂದುವರಿದಿದ್ದು, ಈವರೆಗೆ ಅವ್ಯವಹಾರದಲ್ಲಿ ಭಾಗಿಯಾದ ಆರೋಪದ ಮೇಲೆ ಇದುವರೆಗೂ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಾದ ಆನಂದ ದೇಸಾಯಿ, ಸುಲೇಮಾನ್‌ ಲಿಂಗದಹಳ್ಳಿ, ಹೊನ್ನಪ್ಪ ಮಲಕಪ್ಪನವರ, ವೆಂಕಟೇಶ ಮಡಿವಾಳರ, ಬಸವರಾಜ ಹುನ್ನೂರ; ಗ್ರಾಮ ಸಹಾಯಕರಾದ ಚಿದಾನಂದ ಆನವಟ್ಟಿ, ಮರೆಡೆಪ್ಪ ಆನವಟ್ಟಿ, ಹನುಮಂತಪ್ಪ ಕಾಳೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ರಾಣೆಬೆನ್ನೂರು ತಾಲ್ಲೂಕಿನ ಶಿವಾನಂದ ಏಳೂರ, ಅಮಿತ್‌ ಯಂಕಪ್ಪಗೋಳ, ಬಸವರಾಜ ಏಳೂರ ಅವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

18 ಕೋಟಿ ಅವ್ಯವಹಾರ

ADVERTISEMENT

‘ನೆರೆ ಪರಿಹಾರದಲ್ಲಿ ಈವರೆಗೆ ₹18ರಿಂದ 20 ಕೋಟಿಗಳಷ್ಟು ಅವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ. ಬೆಳೆ ಪರಿಹಾರ ಮಾದರಿಯಲ್ಲೇ ಮನೆ ಹಾನಿ ಪರಿಹಾರ ವಿತರಣೆಯಲ್ಲೂ ಲೋಪವಾಗಿದೆಯಾ ಎಂಬುದನ್ನು ಪರಿಶೀಲಿಸಲು ಪ್ರಾದೇಶಿಕ ಆಯುಕ್ತರು, ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚಿಸಿದ್ದಾರೆ ಎಂದು ವಿವರಿಸಿದರು.

ಎನ್.ಡಿ.ಆರ್.ಎಫ್/ ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ 4.38 ಎಕರೆವರೆಗೆ ಒಂದು ಖಾತೆಗೆ ಪರಿಹಾರ ಒದಗಿಸಬೇಕು. ಇದಕ್ಕಿಂತ ಹೆಚ್ಚುವ ಹಿಡುವಳಿ ಹೊಂದಿದವರ ಜಮೀನು ವಿಭಾಗಿಸಿ, ಬೇರೆ ಬೇರೆ ಆಧಾರ್ ಸಂಖ್ಯೆ ಜೋಡಿಸಿ ಹಣ ಬೇರೆ ಬೇರೆಯವರಿಗೆ ಹಣ ಪಾವತಿಯಾಗಿರುವುದು ಕಂಡು ಬಂದಿದೆ. ಬಹುಪಾಲು ಪ್ರಕರಣಗಳಲ್ಲಿ ಪ್ರಕೃತಿ ವಿಕೋಪ ಕಾಯ್ದೆಯಡಿ ನಿಯಮಾನುಸಾರ ಪರಿಹಾರ ವಿತರಿಸುವ ಮೊದಲು ನಮೂನೆ 1ರಲ್ಲಿ ಜಮೀನು ಪರಿಶೀಲಿಸಿ ರೈತರು ಬೆಳೆದ ಬೆಳೆಯ ಮಾಹಿತಿ, ಹಿಡುವಳಿ ಮಾಹಿತಿಯನ್ನು ನಿರ್ವಹಣೆ ಮಾಡಿರುವುದಿಲ್ಲ ಎಂದು ಹೇಳಿದರು.

3.10 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ!

ಜಿಲ್ಲೆಯಲ್ಲಿ 3,71,459 ಹೆಕ್ಟೇರ್ ಬಿತ್ತನೆಯಾಗಿದೆ. ಈ ಪೈಕಿ 3,10,537 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಈವರೆಗೆ ಬೆಳೆನಷ್ಟ ಪರಿಹಾರವಾಗಿ 202 ಕೋಟಿ ಪಾವತಿಸಲಾಗಿದೆ. ₹ 105 ಕೋಟಿ ಮನೆ ಹಾನಿ ಪರಿಹಾರಕ್ಕೆ ಬಿಡುಗಡೆಯಾಗಿದೆ. ಮೂಲಭೂತ ಸೌಕರ್ಯಗಳಿಗಾಗಿ ₹35 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಕೂತು ಅಕ್ರಮ!

ಬಂಧನವಾದ ನಾಲ್ಕು ಜನ ಗ್ರಾಮ ಲೆಕ್ಕಾಧಿಕಾರಿಗಳ ಪೈಕಿ ಬಸವರಾಜ ಅಪ್ಪಸಾಬ ಹೊನ್ನೂರ ಎಂಬಾತ ರಾಣೇಬೆನ್ನೂರು ತಾಲ್ಲೂಕಿನ ಗುಡ್ಡಗುಡ್ಡಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಂತರ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಅಸುಂಡಿಕೆರೆಕಟ್ಟೆ ಗ್ರಾಮಲೆಕ್ಕಾಧಿಕಾರಿಯಾಗಿ ಹೊಸದಾಗಿ ನೇಮಕಗೊಂಡು ಹಾವೇರಿಯಿಂದ ಬಿಡುಗಡೆಗೊಂಡಿದ್ದ.

ಹಾವೇರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಆತನಿಗೆ ನೀಡಿದ ಪಾಸ್‍ವರ್ಡ್ ದುರುಪಯೋಗ ಪಡಿಸಿಕೊಂಡಿದ್ದಾನೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದಲೇ ಲಾಗಿನ್ ಆಗಿ ತನ್ನ ಸ್ನೇಹಿತರ ಖಾತೆಗಳಿಗೆ ಬೆಳೆ ಪರಿಹಾರ ಹಣವನ್ನು ಪಾವತಿ ಮಾಡಿದ್ದಾನೆ. ಸ್ನೇಹಿತರಾದ ಐಗಳಿಯ ಬಸವರಾಜ ಸದಾಶಿವ ಏಳೂರ, ಶಿವಾನಂದ ಏಳೂರ ಹಾಗೂ ಅಮಿತ್‌ ಖಾತೆಗೆ ಹಣ ಪಾವತಿಯಾಗುವಂತೆ ನೋಡಿಕೊಂಡಿರುವ ಪ್ರಕರಣ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಈ ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು. ಪೊಲೀಸ್ ತನಿಖೆ ಮುಂದುವರಿದಂತೆ ವಂಚನೆಯ ಹೊಸ ಹೊಸ ಮಾರ್ಗಗಳು ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.