ADVERTISEMENT

‘ತುರ್ತು ಸ್ಪಂದನ’ ವ್ಯವಸ್ಥೆ ಜಾರಿ

ತ್ವರಿತ ಸೇವೆಗೆ 112ಗೆ ಕರೆ ಮಾಡಿ: ಎಸ್ಪಿ ಕೆ.ಜಿ.ದೇವರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 12:31 IST
Last Updated 5 ಅಕ್ಟೋಬರ್ 2020, 12:31 IST
ಹಾವೇರಿ ಜಿಲ್ಲೆಗೆ ಬಂದಿರುವ ‘ತುರ್ತು ಸ್ಪಂದನ ಸಹಾಯ ವ್ಯವಸ್ಥೆ –112’ ವಾಹನಗಳು
ಹಾವೇರಿ ಜಿಲ್ಲೆಗೆ ಬಂದಿರುವ ‘ತುರ್ತು ಸ್ಪಂದನ ಸಹಾಯ ವ್ಯವಸ್ಥೆ –112’ ವಾಹನಗಳು   

ಹಾವೇರಿ: ‘ದೇಶದಾದ್ಯಂತ ಒಂದೇ ತುರ್ತು ಕರೆ ಸಂಖ್ಯೆ (112) ಯನ್ನು ಜಾರಿಗೊಳಿಸಲಾಗಿದೆ. ಈ ಸಂಬಂಧ ದಾವಣಗೆರೆ, ಬಾಗಲಕೋಟೆ ಮತ್ತು ಹಾವೇರಿ ಈ ಮೂರು ಜಿಲ್ಲೆಗಳಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ‘ಪ್ರಾಯೋಗಿಕ ಯೋಜನೆ’ಯನ್ನು ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಒಂದೇ ಭಾರತ, ಒಂದೇ ತುರ್ತು ಕರೆ ಸಂಖ್ಯೆ–112’ ಎಂಬ ಪರಿಕಲ್ಪನೆಯಡಿ ಕೇಂದ್ರ ಸರ್ಕಾರ ‘ತುರ್ತು ಸ್ಪಂದನ ಸಹಾಯ ವ್ಯವಸ್ಥೆ’ (ಇ.ಆರ್.‌‌ಎಸ್.‌ಎಸ್)‌ ಜಾರಿಗೊಳಿಸಿದೆ. ಸಾರ್ವಜನಿಕರು ಈ ಉಚಿತ ಸಂಖ್ಯೆಗೆ ಕರೆ ಮಾಡಿ ಪೊಲೀಸ್‌, ಅಗ್ನಿಶಾಮಕ ಮತ್ತು ವೈದ್ಯಕೀಯ ಸೇವೆಗಳಿಂದ ತ್ವರಿತ ನೆರವು ಪಡೆಯಬಹುದು. ದಿನದ 24 ಗಂಟೆಯೂ ಈ ಸೇವೆ ಲಭ್ಯ ಎಂದು ಮಾಹಿತಿ ನೀಡಿದರು.

‘100, 101 ಮುಂತಾದ ತುರ್ತು ಸೇವೆಗಳ ಸಂಖ್ಯೆಗಳನ್ನು 112 ಸಂಖ್ಯೆಗೆ ವಿಲೀನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ 108 ಕೂಡ ವಿಲೀನಗೊಳ್ಳಲಿದೆ. 112ಗೆ ಕರೆ ಮಾಡಿದರೆ, ಯಾರು, ಎಲ್ಲಿಂದ ಕರೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಕೊಂಡು, ಕೂಡಲೇ ಹತ್ತಿರದ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಿ, ಗರಿಷ್ಠ 15ರಿಂದ 17 ನಿಮಿಷಗಳಲ್ಲಿ ‘ತುರ್ತು ಸ್ಪಂದನ ವಾಹನ’ವನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗುವುದು. ‘ರಾಜ್ಯ ತುರ್ತು ಪ್ರಕ್ರಿಯೆ ಕೇಂದ್ರ’ದಿಂದ ಸೇವಾ ಸಮನ್ವಯ ಮಾಡಲಾಗುವುದುಎಂದರು.

ADVERTISEMENT

14 ವಾಹನಗಳ ಆಗಮನ:

ಅ.1ರಿಂದ ನೂತನ ವ್ಯವಸ್ಥೆಯ ಕಾರ್ಯಾಚರಣೆ ಜಾರಿಯಲ್ಲಿದೆ.ಜಿಲ್ಲೆಗೆ ಈಗಾಗಲೇ 14 ತುರ್ತು ಸ್ಪಂದನ ವಾಹನಗಳು ಬಂದಿದ್ದು, ಪ್ರತಿ ವಾಹನಕ್ಕೂ ನಿರೀಕ್ಷಣಾ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಒಂದು ಗಂಟೆ ಬಂದು ನಿಲ್ಲುತ್ತವೆ. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತವೆ. ವಾಹನದಲ್ಲಿ ಪೊಲೀಸ್‌ ಸಿಬ್ಬಂದಿ ಇರುತ್ತಾರೆ. ವಾಹನ ಹೊರಡುವುದರಿಂದ ಹಿಡಿದು ಘಟನಾ ಸ್ಥಳಕ್ಕೆ ತಲುಪವವರೆಗೂ ಜಿಪಿಎಸ್‌ ತಂತ್ರಜ್ಞಾನದ ಮೂಲಕ ನಿರ್ದೇಶನ ನೀಡಲಾಗುತ್ತದೆ. ಕೊನೆಯಲ್ಲಿ ಕರೆ ಮಾಡಿದ ವ್ಯಕ್ತಿಯಿಂದ ‘ಫೀಡ್‌ಬ್ಯಾಕ್‌’ ಕಲೆ ಹಾಕಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.